ಬಾಳೆಹೊನ್ನೂರಿನ ಕಡಬಗೆರೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ದೇವದಾನ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ, ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ಕ್ರಿಯಾಶೀಲವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಸಾಮಾಜಿಕ ಪ್ರಜ್ಞೆ ಕಳೆದುಕೊಂಡ ಸಮಾಜ ಸತ್ತ ಶವವಿದ್ದಂತೆ. ಜಾಗೃತಿಯನ್ನು ಕಳೆದು ಕೊಂಡ ಸಮಾಜ ಸತ್ತ ಶವದ ಗೋರಿಯಂತೆ ಎಂದು ಹಾವೇರಿಯ ಸಾಮಾಜಿಕ ಹೋರಾಟಗಾರ್ತಿ ಕೆ.ಸಿ.ಅಕ್ಷತಾ ಹೇಳಿದರು.
ಕಡಬಗೆರೆ ಗಾಂಧಿ ಮೈದಾನದಲ್ಲಿ ಖಾಂಡ್ಯ ಹೋಬಳಿ ದಲಿತ ಸಂಘರ್ಷ ಸಮಿತಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ತ ಸಮಾಜದಲ್ಲಿ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಅಲ್ಲಿ ಯಾವುದೇ ಜಾಗೃತಿ ಮೂಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಸದಾ ಎಚ್ಚರಗೊಂಡಿರುವ ಸಮಾಜವಾಗಿರಬೇಕು. ಎಚ್ಚರಗೊಂಡಿದ್ದರೆ ಮಾತ್ರ ಕ್ರಿಯಾಶೀಲವಾಗಿರಲು ಸಾಧ್ಯವಿದೆ.
ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯಕ್ರಮಗಳಲ್ಲಿ ಪಕ್ಷ, ರಾಜಕೀಯವನ್ನು ಆಚೆ ಬಿಟ್ಟು ಬರಬೇಕಿದ್ದು, ಇಂದು ಯಾವುದೇ ಪಕ್ಷಗಳು ದಲಿತರನ್ನು ಉದ್ಧಾರ ಮಾಡಿಲ್ಲ. ದಲಿತರಿಗಾಗಿ ಯಾವುದೇ ಪಕ್ಷದ ನಾಯಕರು ಜೀವ ತ್ಯಾಗ ಮಾಡಿಲ್ಲ. ರಾಜಕಾರಣಿಗಳ ಮಕ್ಕಳು, ರಾಜಕಾರಣಿಗಳು ದಲಿತರಿರಾಗಿ ತಮ್ಮ ಬದುಕನ್ನು ತ್ಯಾಗ ಮಾಡಿಲ್ಲ. ದಲಿತರಿಗಾಗಿ ಸರ್ವವನ್ನು ತ್ಯಾಗ ಮಾಡಿ, ಸರ್ವಸ್ವವನ್ನು ಕಳೆದುಕೊಂಡು ನಿಮ್ಮ ಗೌರವ, ಘನತೆಗಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ನ್ಯಾಯಕ್ಕಾಗಿ ಹೋರಾಡಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂಬುದನ್ನು ಅರಿಯಬೇಕಿದೆ.
ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ನಡೆಯಬೇಕಿದೆ. ಇಂದು ಗ್ರಂಥಾಲಯ, ಶಾಲೆಗಳು ನಿರ್ಮಾಣವಾಗ ಬೇಕಾದ ಜಾಗದಲ್ಲಿ ದೇವಾಲಯಗಳು ನಿರ್ಮಾಣವಾಗುತ್ತಿದೆ. ಹೆಚ್ಚು ಶಾಲೆಗಳನ್ನು ನಿರ್ಮಾಣ ಮಾಡಿ ನಾವು ಗುಣಮಟ್ಟದ ಶಿಕ್ಷಣ ಪಡೆಯಬೇಕಿದೆ. ಶಿಕ್ಷಣದಿಂದ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಿದ್ದು, ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬಗೆರೆಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಹಾಗೂ ದೇವದಾನ ಗ್ರಾಮದ ಸರ್ವೇ ನಂ.279ರಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಶಾಸಕ ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಖಾಂಡ್ಯ ಹೋಬಳಿ ಡಿಎಸ್‌ಎಸ್ ಅಧ್ಯಕ್ಷ ಬಿ.ಕೆ.ರಮೇಶ್, ಜಿಪಂ ಮಾಜಿ ಸದಸ್ಯ ಎಸ್.ಪೇಟೆ ಸತೀಶ್, ಡಿಎಸ್‌ಎಸ್ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮಂಜುನಾಥ್ ಕೂದುವಳ್ಳಿ, ಲಕ್ಷ್ಮ್ಮಣ್ ಹುಣಸೇಮಕ್ಕಿ, ಗಿರೀಶ್, ವಸಂತ, ಹರೀಶ್ ಬಾಸಾಪುರ, ರಾಘವೇಂದ್ರ ಒಳಗೋಡು ಮತ್ತಿತರರು ಹಾಜರಿದ್ದರು.