ಹನೂರು: ಸಮಾಜದ ಪ್ರತಿಯೊಬ್ಬರೂ ಕುಲಕಸುಬನ್ನು ಅನುಸರಿಸುವ ಮೂಲಕ ಅಭಿವೃದ್ಧಿ ಹೊಂದಬೇಕು. ಇದಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ತಾಲೂಕು ವಿಶ್ವಕರ್ಮ ಸಮಾಜ, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶವು ತನ್ನದೇಯಾದ ಕಲಾಶೈಲಿಯನ್ನು ಹೊಂದಿದ್ದು, ಇತರ ದೇಶಗಳಿಗಿಂತ ಭಿನ್ನವಾಗಿದೆ. ಹಾಗಾಗಿ ದೇಶದ ಇತಿಹಾಸವನ್ನು ನೋಡಿದಾಗ ದೇಗುಲಗಳಲ್ಲಿ ವೈಶಿಷ್ಟತೆಯನ್ನು ಕಾಣಬಹುದು. ಇದು ವಿಶ್ವಕರ್ಮರ ಕೊಡುಗೆ. ಸಮುದಾಯದ ಜನರು ಮರ, ಕಬ್ಬಿಣ, ತಾಮ್ರ, ಚಿನ್ನ-ಬೆಳ್ಳಿ ಹಾಗೂ ಕಲ್ಲಿನಲ್ಲಿ ಕಲಾ ನೈಪುಣ್ಯ ಬಿಂಬಿಸುವಂತಹ ಕುಲಕಸುಬಿನಲ್ಲಿ ತಲ್ಲೀನರಾಗಿದ್ದು, ಪ್ರತಿ ಮನೆಯಲ್ಲೂ ಇವರ ತಯಾರಿಸಿದ ವಸ್ತುಗಳು, ಮೂರ್ತಿಗಳು ಹಾಗೂ ಕಲಾಕಾರಿಕೆ ಆಭರಣಗಳು ಇರಲಿವೆ. ಆದ್ದರಿಂದ ವೃತ್ತಿ ನೈಪುಣ್ಯತೆಯಲ್ಲಿ ಇವರ ಪಾತ್ರ ಹಿರಿದು ಎಂದರು.
ಹನೂರು ಭಾಗದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುಲಕಸುಬನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ವೃತ್ತಿಯಲ್ಲಿ ಉತ್ಕೃಷ್ಟತೆಯನ್ನು ಹೊಂದುವುದರ ಮೂಲಕ ಅಭಿವೃದ್ಧಿ ಹೊಂದಬೇಕು. ಹಾಗೆಯೇ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯ. ಈ ದಿಸೆಯಲ್ಲಿ ಕೆ.ಪಿ ನಂಜುಂಡಿ ಅವರು ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ ಎಂದರು.
ಹೋರಾಟ ಅಗತ್ಯ: ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಮಾತನಾಡಿ, ವಿಶ್ವಕರ್ಮ ವ್ಯಕ್ತಿಯಲ್ಲ, ದೇವರು. ಸಂಸ್ಕಾರಕ್ಕೆ ಮತ್ತೊಂದು ಹಸರೇ ವಿಶ್ವಕರ್ಮ. ವಿಶ್ವಕರ್ಮ ಸಮಾಜದವರು ಗುಡಿ, ಗೋಪುರ, ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಆದರೆ ಪುರೋಹಿತರ ಸ್ಥಾನ ನೀಡದಿರುವುದು ವಿಪರ್ಯಾಸ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ಕುಲಕಸುಬುಗಳು ಉಳಿಯಬೇಕು. ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಹಾಗಾಗಿ ಹೋರಾಟ ಅಗತ್ಯವಾಗಿದೆ. ಈ ದಿಸೆಯಲ್ಲಿ 8 ವರ್ಷಗಳ ಹೋರಾಟದ ಫಲವಾಗಿ ಹಿಂದೆ ಆಚರಿಸುತ್ತಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಇಂದು ಸರ್ಕಾರ ವಿಶ್ವಕರ್ಮ ಜಯಂತಿ ಆಚರಣೆಗೆ ಬಂದಿದೆ ಎಂದು ತಿಳಿಸಿದರು.
ಸಮುದಾಯ ಭವನ ಅಗತ್ಯ ಕ್ರಮ: ದೇಶದಲ್ಲಿ 10 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಮ್ಮಾರ ಸಮುದಾಯವು ಕೆಲವು ಕಡೆಗಳಲ್ಲಿ ಎಸ್ಸಿ, ಎಸ್ಟಿ ವರ್ಗದಲ್ಲಿದೆ. 1977ರ ಸರ್ಕಾರದ ಆದೇಶದನ್ವಯ ಹನೂರು ಹಾಗೂ ಕೊಳ್ಳೇಗಾಲ ಭಾಗದಲ್ಲಿನ ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಸಮುದಾಯಕ್ಕೆ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಗೊಂಡು ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ. ಹನೂರಿನಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯ ಭವನ ಅಗತ್ಯವಾಗಿದೆ. ಈ ದಿಸೆಯಲ್ಲಿ ಎಂಎಲ್ಸಿ ಅನುದಾನ, ಸ್ಥಳೀಯ ಶಾಸಕರ ಅನುದಾನ ಹಾಗೂ ಮುಖ್ಯಮಂತ್ರಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಕೆ.ಪಿ ನಂಜುಂಡಿ ಭರವಸೆ ನೀಡಿದರು.
ತಹಸೀಲ್ದಾರ್ ವೈ,ಕೆ ಗುರುಪ್ರಸಾದ್, ತಾ.ಪಂ. ಇಒ ಉಮೇಶ್, ಪ.ಪಂ. ಮುಖ್ಯಾಧಿಕಾರಿ ಮೂರ್ತಿ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಸೌಭಾಗ್ಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್, ಜಿಲ್ಲಾ ಕಾರ್ಯದರ್ಶಿ ಹೇಮಂತ್, ವೈದ್ಯ ಡಾ.ನಾಗಲಿಂಗಪ್ಪ, ಮುಖಂಡರಾದ ಶ್ರೀನಿವಾಸಮೂರ್ತಿ, ತಾಳವಾಡಿಯ ಪುಟ್ಟಸ್ವಾಮಿ, ಮುತ್ತುರಾಜು, ರವೀಂದ್ರ, ನಟರಾಜು ಸಿದ್ದರಾಜು ಇತರರು ಇದ್ದರು.
ವಿಜೃಂಭಣೆಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆರ್‌ಎಂಸಿ ಆವರಣದಲ್ಲಿ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಅಶ್ವರೂಢ ತೆರೆದ ವಾಹನದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ನೆರೆದಿದ್ದ ಸಮಾಜದ ಜನತೆಯಿಂದ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯೂ ಮಹದೇಶ್ವರಬೆಟ್ಟದ ಮುಖ್ಯರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಬಸ್ ನಿಲ್ದಾಣದ ಮೂಲಕ ಸಿದ್ದಪ್ಪಾಜಿ ದೇಗುಲದ ತನಕ ಸಾಗಿತು. ಸುಮಾರು 3 ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು, ಹೆಣ್ಣು ಮಕ್ಕಳು ಸಾಗಿದರು. ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಒಂದೆಡೆ ವಾದ್ಯ ಹಾಗೂ ತಮಟೆ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರೆ ಮತ್ತೊಂದೆಡೆ ಹೆಣ್ಣು ಮಕ್ಕಳ ಮಾರಿಕುಣಿತ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.