ಕಿಕ್ಕೇರಿ: ಸರ್ಕಾರ ಅನುದಾನ ನೀಡದೆ ತಾಲೂಕು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಶಾಸಕ ಎಚ್.ಟಿ. ಮಂಜು ಬೇಸರ ವ್ಯಕ್ತಪಡಿಸಿದರು.
ಸಮೀಪದ ಕೃಷ್ಣಾಪುರ, ಗಾಂಧಿನಗರ, ಹಿರಿಕಳಲೆ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿಯಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ 2, 5ವರ್ಷದಿಂದ ಒಂದೇ ಒಂದು ಆಶ್ರಯ ಮನೆ ಮಂಜೂರು ಮಾಡಿಲ್ಲ. ತಾಲೂಕು ಅಭಿವೃದ್ಧಿಗಾಗಿ ಅನುದಾನ ತರಲು ನಿತ್ಯ ಹೋರಾಡಬೇಕಿದೆ. ಕಾಂಗ್ರೆಸ್ ಶಾಸಕರಿಗೆ ಅನುದಾನಕ್ಕೆ ಗೋಗರೆಯುವ ಸ್ಥಿತಿ ಇದ್ದು, ವಿಪಕ್ಷದವರ ಸ್ಥಿತಿ ಹೋರಾಟವೇ ಅಸ್ತ್ರವಾಗಬೇಕಿದೆ. ಶಾಸನಬದ್ಧವಾದ ಅನುದಾನ ನೀಡಿದರೆ ಸಾಕು ತಾಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬಹುದು ಎಂದು ನುಡಿದರು.
ತಾಲೂಕಿನಲ್ಲಿ ಈಚೆಗೆ ನಡೆದ ಟಿಎಪಿಸಿಎಂಎಸ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿಕೊಟ್ಟಿದ್ದಾರೆ. ಇದು ಜೆಡಿಎಸ್ ಪಕ್ಷದ ಮೇಲೆ ಜನತೆ ಇಟ್ಟಿರುವ ಪ್ರೀತಿ, ವಿಶ್ವಾಸವಾಗಿದೆ. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಗದ್ದುಗೆ ಹಿಡಿಯುವ ವಿಶ್ವಾಸವಿದೆ ಎಂದರು.
ಟಿಎಪಿಎಂಎಸ್ ನಿರ್ದೇಶಕ ಕಾಯಿ ಮಂಜುನಾಥ್, ಮಂಜುನಾಥನಾಯಕ್, ಹಿರೀಕಳಲೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಚೌಡೇನಹಳ್ಳಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಪಿಡಿಒ ನವೀನ್, ರವಿ, ಗಣೇಶ್, ಕೆಂಪರಾಜು, ಸಣ್ಣನಿಂಗಯ್ಯ, ಗುರುರಾಜ್, ತಮ್ಮಯ್ಯ, ರೋಷನ್, ಮಹೇಶ್, ಗಣೇಶಾಚಾರ್, ವಿಜಯ್‌ಕುಮಾರ್, ಗಿರೀಶ್, ಅಂಬುಜಮ್ಮ, ಗಿರೀಗೌಡ, ಜಯಲಕ್ಷ್ಮಮ್ಮ, ಪುಷ್ಪಲತಾ ಇದ್ದರು.