ಮೂಡಿಗೆರೆ: ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಇಲ್ಲದಿರುವುದರಿಂದ ಕಚೇರಿ ಪೂರ್ತಿ ಖಾಲಿ ಹೊಡೆಯುತ್ತಿದೆ. ಸಾರ್ವಜನಿಕರು ಕೆಲಸಗಳಿಗಾಗಿ ಅರ್ಜಿ ಹಿಡಿದು ದಿನಪೂರ್ತಿ ತಿರುಗಾಡಿದರೂ ಒಬ್ಬ ಅಧಿಕಾರಿಯೂ ಸಿಗುತ್ತಿಲ್ಲ.
ಪಪಂನಲ್ಲಿ ಆರು ತಿಂಗಳಲ್ಲಿ ನಾಲ್ವರು ಮುಖ್ಯಾಧಿಕಾರಿಗಳು ಪಲಾಯನ ಮಾಡಿದ್ದಾರೆ. ಮುಖ್ಯಾಧಿಕಾರಿಯಾಗಿದ್ದ ರಂಗಸ್ವಾಮಿ ಕೆಲ ತಿಂಗಳಷ್ಟೇ ಕರ್ತವ್ಯದಲ್ಲಿದ್ದು ಸಂಜೆ ಮನೆಗೆ ಹೋದವರು ಕಚೇರಿಗೆ ಮರಳಲಿಲ್ಲ. ಗಿರೀಶ್ ಬಂದ ಒಂದೇ ತಿಂಗಳಿಗೆ ವಾಪಸ್ ಹೋದರು. ಅವರ ನಂತರ ಬಂದ ಕಲಾವತಿ ಅವರು ಒಂದೆರಡು ತಿಂಗಳು ಕಾರ್ಯನಿರ್ವಹಿಸಿ ವರ್ಗಾವಣೆಯಾದರು.
ಪಪಂನಲ್ಲಿ ಮುಖ್ಯಾಧಿಖಾರಿ ಇಲ್ಲದಿರುವುದನ್ನು ಗಮನಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಲತಾ ಎಂಬುವವರನ್ನು ಪಪಂ ಮುಖ್ಯಾಧಿಕಾರಿ ಹುದ್ದೆಗೆ 20 ದಿನದ ಹಿಂದೆ ಕಳಿಸಿಕೊಟ್ಟಿದ್ದರು. ಆದರೆ ಅವರು 15 ದಿನ ಕರ್ತವ್ಯ ನಿರ್ವಹಿಸಿ ಕಳೆದವಾರ ಹೋದವರು ಮತ್ತೆ ಬಂದಿಲ್ಲ. ಲತಾ ಅವರು ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗ ಪಪಂಗೆ ಮುಖ್ಯಾಧಿಕಾರಿ ಇಲ್ಲದೇ ಕಚೇರಿ ಕೆಲಸಗಳು ಬಾಕಿ ಉಳಿದಿವೆ.
ಪಪಂನಲ್ಲಿ ಒಟ್ಟು 40 ಹುದ್ದೆಗಳಿದ್ದು, ಅದರಲ್ಲಿ 16 ಮಂದಿ ಮಾತ್ರ ಕಾಯಂ ನೌಕರರಿದ್ದಾರೆ. 24 ಹುದ್ದೆ ಖಾಲಿಯಿದೆ. ಕಂಪ್ಯೂಟರ್ ಆಪರೇಟರ್ 2, ವಾಹನ ಚಾಲಕರು 5, ವಾಲ್ಮ್ಯಾನ್ 14, ಒಟ್ಟು 21 ಹೊರಗುತ್ತಿಗೆ ನೌಕರರಿದ್ದಾರೆ. ಇಬ್ಬರು ಪೌರಕಾರ್ಮಿಕರನ್ನು ಪಪಂನಿಂದ ನೇರ ಪಾವತಿಯಡಿ ನಿಯೋಜಿಸಿಕೊಳ್ಳಲಾಗಿದೆ. ಇಂಜಿನಿಯರ್ ಹುದ್ದೆ ಐದು ವರ್ಷಗಳಿಂದ ಖಾಲಿ ಉಳಿದಿದೆ.