ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ಸೋಮವಾರ ವ್ನಿೇಶ್ವರ ದೇವಸ್ಥಾನದ ನವೀಕರಣ ಕಾಮಗಾರಿಗೆ ಶಾಸಕ ಎಚ್.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಅಮೃತೇಶ್ ಚನ್ನಕೇಶವ, ಲಕ್ಷ್ಮಣ್, ಜಾವಿದ್, ಕುಮಾರ್ ಇದ್ದರು. 
ಜಿಲ್ಲೆ

ರಾಜ್ಯ ಸರ್ಕಾರದಿಂದ ಗ್ಯಾರಂಟಿ ಜಾರಿ ಜತೆಗೆ ಅಭಿವೃದ್ಧಿ ಆಡಳಿತ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಚುನಾವಣಾ ಪೂರ್ವದಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯವನ್ನು ಸಮಾನವಾಗಿ ಕೊಂಡೊಯ್ಯಲಾಗುತ್ತಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.
ನಗರಸಭೆ ಉದ್ಯಾನವನದ ಆವರಣದಲ್ಲಿ ಸೋಮವಾರ ವ್ನಿೇಶ್ವರ ದೇವಸ್ಥಾನದ ನವೀಕರಣ ಹಾಗೂ ಎಂ.ಜಿ ರಸ್ತೆ ಮತ್ತು ಎಐಟಿ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಲಭ ಶೌಚಗೃಹ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಪಕ್ಷ ನೀಡಿದ 4 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಯುವನಿಧಿ ಗ್ಯಾರಂಟಿಗೆ 12ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಂ.ಜಿ ರಸ್ತೆ ಹಾಗೂ ಎಐಟಿ ವೃತ್ತದಲ್ಲಿ ಶೌಚಗೃಹ ನಿರ್ಮಾಣ ಹಲವು ವರ್ಷಗಳ ಬೇಡಿಕೆಯಾಗಿತ್ತು. ಹೀಗಾಗಿ ಸುಮಾರು 24.05 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಮಾದರಿಯ ಶೌಚಗೃಹ ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದ ಕಾಲೇಜು ವಿದ್ಯಾರ್ಥಿಗಳು ಮತ್ತು ಬಸ್ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜತೆಗೆ ಸ್ಥಳದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳ ನಂತರ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. ಇಂದು ಸುಮಾರು 10.3 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಜನಸ್ನೇಹಿ ಆಡಳಿತ ನೀಡಲು ಪ್ರತಿ ವಾರ್ಡ್‌ಗಳಲ್ಲಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.