ವಿಜಯವಾಣಿ ವಿಶೇಷ, ಚಿತ್ರದುರ್ಗ
ತಮ್ಮ ಕ್ಷೇತ್ರದ ಅಭಿವೃದ್ಧಿ ಮನವಿಗಳಿಗೆ ಕೆಲವು ಸಚಿವರು ಸೂಕ್ತವಾಗಿ ಸ್ಪಂದಿಸದಿರುವ ಬಗ್ಗೆ ನಿರಾಶರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಚಿತ್ರದುರ್ಗದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮತ್ತು ಸಚಿವರು ಅಭಿವೃದ್ಧಿ ಕೆಲಸಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಲು ಅವರು ಹೈಕಮಾಂಡ್‌ಗೆ ಅಹವಾಲು ಸಲ್ಲಿಸಿದ್ದಾರೆ.
ಸುರ್ಜೇವಾಲ ಅವರೊಂದಿಗಿನ ಭೇಟಿಯಲ್ಲಿ ವೀರೇಂದ್ರ ಪಪ್ಪಿ ಅವರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
ರಸ್ತೆ ವಿಸ್ತರಣೆ ಅನುದಾನ:
ಚಿತ್ರದುರ್ಗ ನಗರದ ರಸ್ತೆಗಳು ಕಿರಿದಾಗಿದ್ದು, ವಿಸ್ತರಣೆಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕುಡಿಯುವ ನೀರಿನ ವಿಶೇಷ ಪ್ಯಾಕೇಜ್: ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಿರಿಯೂರು ವಾಣಿವಿಲಾಸ ಸಾಗರ ಜಲಾಶಯದಿಂದ ಚಿತ್ರದುರ್ಗಕ್ಕೆ ನೀರು ಪೂರೈಸುವ ಎರಡನೇ ಹಂತದ ಕಾಮಗಾರಿಗೆ 450 ಕೋಟಿ ರೂ. ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ:
ಭದ್ರಾ ಮೇಲ್ದಂಡೆ ಯೋಜನೆಯಡಿ ಡಿಪಿಆರ್ ಆಗಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 8 ಕೆರೆಗಳನ್ನು ತುಂಬಿಸಲು ಅನುಮೋದನೆ ನೀಡುವಂತೆ ಕೋರಿದ್ದಾರೆ.
ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ: ನಗರದಲ್ಲಿ ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ತ್ವರಿತಗತಿಯಲ್ಲಿ ನಿರ್ಮಿಸಲು ಮತ್ತು ಎಲೆಕ್ಟ್ರಿಕಲ್ ಬಸ್‌ಗಳ ಅನುಕೂಲಕ್ಕಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲು ಒತ್ತಾಯಿಸಿದ್ದಾರೆ. ನಗರದ ಮೂಲಕ 2 ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಪ್ರತಿದಿನ 5 ಸಾವಿರ ಬಸ್‌ಗಳು ಸಂಚರಿಸುತ್ತವೆ. ಕನಿಷ್ಠ 25 ಸಾವಿರ ಜನರು ನಗರಕ್ಕೆ ಬಂದು ಹೋಗುತ್ತಾರೆ. ವ್ಯಾಪಾರ ವಹಿವಾಟಿಗೂ ಇದು ಅನುಕೂಲವಾಗಲಿದ್ದು, ಶೀಘ್ರ ನಿಲ್ದಾಣ ನಿರ್ಮಾಣವಾಗಬೇಕು ಎಂದು ತಿಳಿಸಿದ್ದಾರೆ.
ಪ್ರವಾಸಿ ಸರ್ಕ್ಯೂಟ್ ಅಭಿವೃದ್ಧಿ:
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಅಭಿವೃದ್ಧಿಯಾಗಬೇಕಿದೆ. ಒನಕೆ ಓಬವ್ವಳ ಸಾಹಸಕ್ಕೆ ಪ್ರಸಿದ್ಧವಾದ ಕೋಟೆಯನ್ನು ವಿಶ್ವ ಪಾರಂಪ ರಿಕ ಪಟ್ಟಿಗೆ ಸೇರಿಸಬೇಕು. ಚಂದ್ರವಳ್ಳಿ ಕೆರೆ,ಜೋಗಿಮಟ್ಟಿ ವನ್ಯಜೀವಿಧಾಮ, ಆಡುಮಲ್ಲೇಶ್ವರ ಕಿರುಮೃಗಾಲಯ, ಮುರುಘಾಮಠ, ನಾ ಯಕಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಸೇರಿದಂತೆ ನಗರದ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದಿದ್ದಾರೆ.
ಚಿತ್ರದುರ್ಗ ದರ್ಶನ ಮತ್ತು ಕೈಗಾರಿಕಾ ಅಭಿವೃದ್ಧಿ:
ಮತ್ತೆ ದುರ್ಗೋತ್ಸವ ಆಚರಿಸುವುದರೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹಂಪಿ ಮಾದರಿಯಲ್ಲಿ ‘ಚಿತ್ರದುರ್ಗ ದರ್ಶನ’ ರೂಪಿಸಬೇಕು. ಬೆಂಗಳೂರು-ಹುಬ್ಬಳ್ಳಿ ಹೆದ್ದಾರಿಗೆ 200 ಕಿ.ಮೀ. ಅಂತರದಲ್ಲಿರುವ ಚಿತ್ರದುರ್ಗದಲ್ಲಿ ಕೈಗಾರಿಕೆಗಳು, ಐಟಿ ಮತ್ತು ಬಿಟಿ ಕ್ಷೇತ್ರಗಳ ಅಭಿವೃದ್ಧಿಗೂ ಅವಕಾಶವಿದೆ ಎಂದು ಸುರ್ಜೇವಾಲ ಅವರ ಗಮನ ಸೆಳೆದಿದ್ದಾರೆ.
---
ಕೋಟ್
------
ಚಿತ್ರದುರ್ಗ ನಗರ, ಕ್ಷೇತ್ರದ ಹಲವು ಅಭಿವೃದ್ಧಿ ಕೆಲಸಗಳಿಗೆ ಅನೇಕ ಬಾರಿ ಗಮನ ಸೆಳೆದರೂ ಕಿವಿಗೊಡದ ಕೆಲವು ಸಚಿವರ ನಡೆ ಕುರಿತಂತೆ ರಣದೀಪ್‌ಸಿಂಗ್ ಸುರ್ಜೇವಾಲ ಅವರ ಗಮನಕ್ಕೆ ತಂದಿದ್ದೇನೆ. ಲಿಖಿತವಾಗಿ ಅಭಿವೃದ್ಧಿ ಕೆಲಸಗಳ ಕುರಿತಂತೆ ಮನವಿ ಸಲ್ಲಿಸಿದ್ದೇನೆ.
ಕೆ.ಸಿ. ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ.
---