ಹುಬ್ಬಳ್ಳಿ: ಸಂಘಟಿತ, ಅಸಂಘಟಿತ ಕಾರ್ವಿುಕರ ಸವಲತ್ತುಗಳಿಗಾಗಿ ಹೋರಾಟದ ಕಿಚ್ಚು ಹಚ್ಚಿ, ಸಮಾಜದಲ್ಲಿ ನಾಯಕತ್ವದ ಗುಣ ಬೆಳೆಸಿದ ಶ್ರೇಯಸ್ಸು ಡಾ.ಕೆ.ಎಸ್. ಶರ್ಮಾ ಅವರಿಗೆ ಸಲ್ಲುತ್ತದೆ. ಅವರ ಹೋರಾಟದ ಹಾದಿ ಅವಿಸ್ಮರಣೀಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಣ್ಣಿಸಿದರು.
ಡಾ.ಕೆ.ಎಸ್. ಶರ್ಮಾ ಅವರ 90ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿರುವ ವರಕವಿ ಡಾ.ದ.ರಾ. ಬೇಂದ್ರೆ ಸಾಹಿತ್ಯ ಸಪ್ತಾಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಪನ್ಯಾಸ ಹಾಗೂ ‘ಮಿಸ್ ಫಾರ್ಚುನ್’ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೋರಾಟದಲ್ಲಿಯೇ ಶರ್ಮಾ ಅವರು ತಮ್ಮ ಜೀವನ ಕಳೆದಿದ್ದಾರೆ. ಅಸಂಘಟಿತ ಕಾರ್ವಿುಕರ ಹಕ್ಕೊತ್ತಾಯದ ಹೋರಾಟದಲ್ಲಿ ಮುಂಚೂಣಿ ಸ್ಥಾನವಹಿಸಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ನೂತನ ಕಾರ್ವಿುಕ ಕಾನೂನು ರೂಪುಗೊಳಿಸಿ, 23 ಸಾವಿರ ಅಸಂಘಟಿತ ಕಾರ್ವಿುಕರನ್ನು ಕಾಯಂಗೊಳಿಸಿದೆ. ಇದಕ್ಕೆ ಸ್ಪೂರ್ತಿ ನೀಡಿದವರು ಡಾ.ಕೆ.ಎಸ್. ಶರ್ಮಾ ಅವರು ಎಂದರು.
ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಅವರು ಬೇಂದ್ರೆಯವರ ಬರಹಗಳಲ್ಲಿ ತತ್ವಜ್ಞಾನದ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್. ಶರ್ಮಾ ಮಾತನಾಡಿದರು.
‘ಮಿಸ್ ಫಾರ್ಚೂನ್’ ಎಂಬ ನಾಟಕ ಪ್ರದರ್ಶನ ನಡೆಯಿತು. ಸಂಸ್ಥೆಯ ಚೇರ್ಮನ್ ಮೋಹನ ಲಿಂಬಿಕಾಯಿ, ಆಡಳಿತಾಧಿಕಾರಿ ಶ್ರೀನಿವಾಸ ಬನ್ನಿಗೊಳ್ಳ, ನಿರ್ದೇಶಕರಾದ ರಾಮ ತೇಗೂರ, ರವೀಂದ್ರ ಶಿರೋಳಕರ, ಪ್ರಾಧ್ಯಾಪಕಿ ಅಂಜನಾ ಸಿದ್ದಾಪುರ ಇತರರು ಇದ್ದರು.