ಕೊಳ್ಳೇಗಾಲ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸೃಜನಶೀಲತೆ, ಕೌಶಲ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಕೊಳ್ಳೇಗಾಲ ಮತ್ತು ಹನೂರು ತಾಲೂಕು ಉಪ್ಪಾರ ಸರ್ಕಾರಿ ನೌಕರರ ಸಂಘ ವತಿಯಿಂದ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡುತ್ತದೆ. ಉಪ್ಪಾರ ಸರ್ಕಾರಿ ನೌಕರರ ಸಂಘ ಪ್ರತಿ ವರ್ಷ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಉಪ್ಪಾರ ಸಮುದಾಯದ ಜನರು ಎಲ್ಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಎಲ್ಲರೂ ಶಿಕ್ಷಣ ಪಡೆಯಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಕಾರಣವಾಗಿದೆ. ಎಲ್ಲರಿಗೂ ಸಮಾನ ಹಕ್ಕನ್ನು ನೀಡಿದೆ. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸೃಜನಶೀಲತೆ, ಕೌಶಲ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಧನೆಗೆ ದಾರಿ ತೋರಿಸಬೇಕು ಎಂದು ಹೇಳಿದರು.
ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಪಾಲಕರು ಮಕ್ಕಳನ್ನು ಆಸ್ತಿಗಳನ್ನಾಗಿ ಮಾಡಬೇಕು. ಹಿಂದೆ, ಮಕ್ಕಳಿಗೆ ಆಸ್ತಿ ಮಾಡಿ ಇಡುತ್ತಿದ್ದರು. ಆದರೆ, ಕಾಲ ಬದಲಾಗಿದೆ, ಪ್ರಸ್ತುತ ಮಕ್ಕಳನ್ನು ಚೆನ್ನಾಗಿ ಓದಿಸಿದರೆ ಅವರು ಸಮಾಜದ ಆಸ್ತಿ ಆಗುತ್ತಾರೆ. ಈಗಲೂ ಬಾಲ್ಯವಿವಾಹ ನಡೆಯುತ್ತಿದೆ. ಪಾಲಕರು ಈ ಕಾನೂನು ಬಾಹಿರ ಕೃತ್ಯ ಮಾಡಬೇಡಿ. ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಿ. ಈ ನಿಟ್ಟಿನಲ್ಲಿ ಅವರಿಗೆ ಶಿಕ್ಷಣ ಕೊಡಿಸಬೇಕು. ಬಡ ವಿದ್ಯಾರ್ಥಿಗಳ ಓದಿಗಾಗಿ ಸಹಾಯಬೇಕಿದ್ದರೆ ನಾನು ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳು, ನಿವೃತ್ತ ಶಿಕ್ಷಕರು, ಮುಂಬಡ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮಧುವನಹಳ್ಳಿ ಶಿವಕುಮಾರ್, ತಾಲೂಕು ಉಪ್ಪಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಿಯಶಂಕರ್, ಕಾರ್ಯದರ್ಶಿ ಮಾದೇಶ್, ಕೆನರಾ ಬ್ಯಾಂಕ್ ನಂಜುಂಡಸ್ವಾಮಿ, ನಟರಾಜು, ರವಿ, ಧನಂಜಯ, ಮುಳ್ಳೂರು ಮಹೇಶ್, ಮಾದೇಶ್, ಮುರುಗೇಶ್, ರಾಜು, ಮೋಳೆ ರಾಜು, ಅರಸ ಶೆಟ್ರು, ಉಪ್ಪಾರ ಸಂಘದ ಅಧ್ಯಕ್ಷ ರಮೇಶ್, ಸೋಮಣ್ಣ ಉಪ್ಪಾರ್ ಮತ್ತಿತರಿದ್ದರು.