ಚನ್ನರಾಯಪಟ್ಟಣ: ಪುಸ್ತಕಗಳು ನಮ್ಮ ಜೀವನದ ಸಂಗಾತಿಯಿದ್ದಂತೆ. ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಕರ್ನಾಟಕ ಸಂಘದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸೃಷ್ಟಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಡಾ.ಎ.ಜಿ.ರಾಜು ರಚಿಸಿರುವ ಗುಬ್ಬಚ್ಚಿ ಗೂಡು, ಮೋಕ್ಷಗಾಮಿ, ನಗುವಿನ ಒಡತಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಪುಸ್ತಕ ಅತ್ಯತ್ತಮ ಗೆಳೆಯನಿದ್ದಂತೆ. ಪುಸ್ತಕ ಓದುವುದರಿಂದ ವಿಶ್ವ ಸುತ್ತಿದ ಅನುಭವವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಗೀಳನ್ನು ಕಡಿಮೆ ಮಾಡಿಕೊಂಡು ಮಾನಸಿಕ ಒತ್ತಡದಿಂದ ದೂರಾಗಬೇಕು ಎಂದರು.
ಪುಸ್ತಕ ಓದುವುದರಿಂದ ನಮ್ಮಲ್ಲಿ ಆಲೋಚನಾ ಶಕ್ತಿ ಹೆಚ್ಚುತ್ತದೆ. ಪರಿಷತ್ತು ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿ ಪುಸ್ತಕ ಓದುವ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿದೆ. ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮೆಚ್ಚುವಂತಹದ್ದು. ಡಾ.ಎ.ಜಿ.ರಾಜು ಅವರಿಗೆ ಬಿಡುವಿಲ್ಲ. ಆದರೂ, ಅವರು ಕಾವ್ಯದತ್ತ ಒಲವು ತೋರಿಸಿರುವುದು ನಿಜಕ್ಕೂ ಅಭಿನಂದನಾರ್ಹ. ಕ್ರಿಯಾಶೀಲತೆ ಮತ್ತು ಅಧ್ಯಯನ ಶೀಲತೆಯಿಂದ ಯಾವುದೇ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಾಧಿಸಬಹುದಾಗಿದೆ. ಜೀವನದಲ್ಲಿ ಸಾಧನೆ ಮಾಡಲು ಗುರು ಮತ್ತು ತಂದೆ-ತಾಯಿಯ ಆಶೀರ್ವಾದ ಪ್ರಮುಖವಾಗಿದೆ. ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡಲ್ಲಿ ಅದನ್ನು ತಲುಪುವ ದಾರಿ ಹುಡುಕಬೇಕು. ಸಾಧನೆಗೆ ನಿರಂತರ ಶ್ರಮ ಹಾಗೂ ಗುರು ಭಕ್ತಿ ಅವಶ್ಯವಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಆಧುನಿಕ ಜಗತ್ತಿಗೆ ಮಾರು ಹೋಗಿರುವ ವಿದ್ಯಾರ್ಥಿಗಳು ಸ್ಪರ್ಧೆ ಮತ್ತು ಹಣದ ಹಿಂದೆ ಬಿದ್ದಿದ್ದು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸ್ವಚ್ಛಂದವಾಗಿ ಬದುಕು ಕಲಿಸುವ ಬದಲು ಧಾವಂತದ ಬದುಕಿನಲ್ಲಿ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಕ್ಷಣದ ಸಂತೋಷ ಹಾಗೂ ಮಾನವೀಯತೆ ನಮ್ಮಿಂದ ದೂರವಾಗುತ್ತಿದೆ ಎಂದು ತಿಳಿಸಿದರು.
ಪರಿಸರ ಪ್ರೇಮಿ ಚ.ನಾ.ಅಶೋಕ್ ಮೋಕ್ಷಗಾಮಿ ಕೃತಿ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್ ಕುಮಾರ್ ನಗುವಿನ ಒಡತಿ ಕೃತಿ ಬಿಡುಗಡೆಗೊಳಿಸಿದರು. ಪುಸ್ತಕಗಳ ಕುರಿತು ಯುವ ಸಾಹಿತಿ ಬಿ.ಹೊನ್ನೇನಹಳ್ಳಿ ರಾಜೇಶ್ ಮಾತನಾಡಿದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಲಕ್ಷ್ಮೀಕಾಂತ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ನಿರ್ದೇಶಕ ಅನಿಲ್ ಮರಗೂರು, ಮುಖಂಡರಾದ ಪರಮ ದೇವರಾಜೇಗೌಡ, ವಳಗೇರಹಳ್ಳಿ ಮಂಜುನಾಥ್, ಚಂದ್ರಣ್ಣ, ಸಾಹಿತ್ಯ ಪರಿಷತ್ತಿನ ಮುಳ್ಕೆರೆ ಪ್ರಕಾಶ್, ಶಿವನಗೌಡ ಪಾಟೀಲ್, ಜಬಿವುಲ್ಲಾ ಬೇಗ್, ದಿಂಡಗೂರು ಗೋವಿಂದರಾಜು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.