ನವದೆಹಲಿಯಲ್ಲಿ ಸಚಿವ ಸೋಮಣ್ಣವರ ಅವರನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಲ ಭೇಟಿ ಮಾಡಿ ಮನವಿ ಸಲ್ಲಿಸಿದರು.  
ಜಿಲ್ಲೆ

ಉ-ಕ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೊಳಿಸಿ; ಸಚಿವ ಸೋಮಣ್ಣಗೆ ಶಾಸಕ ಯತ್ನಾಳ ಮನವಿ

ವಿಜಯಪುರ: ಉತ್ತರ ಕರ್ನಾಟಕದ ರೈಲ್ವೆ ಕ್ಷೇತ್ರದ ಅಭಿವೃದ್ಧಿ ಹಾಗೂ ರೈಲ್ವೆ ಸೇವೆಗಳ ವಿಸ್ತರಣೆಗೆ ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದರು.

ಬುಧವಾರ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಶಾಸಕ ಯತ್ನಾಳ, ವಿಜಯಪುರ ನಗರವು ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹುಟಗಿ-ಗದಗ ನಡುವಿನ ರೈಲು ಮಾರ್ಗ ಮೇಲ್ದರ್ಜೆಗೇರಿಸಬೇಕು. ವಿದ್ಯುದ್ದೀಕರಣಗೊಳಿಸಬೇಕು. ಇದರಿಂದ ಈ ಮಾರ್ಗದಲ್ಲಿ ವಂದೇ ಭಾರತ್ ಮತ್ತು ಇತರೆ ಸೂಪರ್ ಫಾಸ್ಟ್ ರೈಲುಗಳು ಸಂಚರಿಸಲು ಅನುಕೂಲವಾಗಲಿದೆ. ವಿಜಯಪುರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿಯಲ್ಲಿ ಮೇಲ್ದರ್ಜೆಗೆ ಏರಿಸಿದರೆ, ರೈಲು ನಿಲ್ದಾಣ ನವೀಕರಣ, ಪ್ರಯಾಣಿಕರಿಗೆ ಸೌಕರ್ಯ, ಪ್ರಯಾಣಿಕರ ಮಾರ್ಗದರ್ಶಿ ಸೂಚನಾ ಫಲಕಗಳ ಅಳವಡಿಕೆ ಮಾಡಲು ಅನುಕೂಲವಾಗುತ್ತದೆ ಎಂದರು.

ನಗರದ ಮುಖ್ಯ ರೈಲು ನಿಲ್ದಾಣದಿಂದ ಇಬ್ರಾಹಿಂಪುರ ರೈಲು ನಿಲ್ದಾಣದ ಮಾರ್ಗ ಮಧ್ಯದಲ್ಲಿ ಬರುವ ರೈಲ್ವೆ ಕಿಮೀ 188/400-500 (ಕನಕದಾಸ ಬಡಾವಣೆ ಬಿಎಸ್‌ಎನ್‌ಎಲ್ ಕ್ವಾಟರ್ಸ್) ಹತ್ತಿರದ ಜಾಗೆಯಲ್ಲಿ ನೈಸರ್ಗಿಕವಾಗಿ ಇರುವ ಎತ್ತರದ ಗುಡ್ಡಕ್ಕೆ ರೈಲ್ವೆ ಮೇಲ್ಸೆತುವೆಯ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಅವಶ್ಯಕತೆಯಿದೆ. ಈ ಮೆಲ್ಸೆತುವೆ ನಿರ್ಮಾಣದಿಂದ ಪಶ್ಚಿಮಕ್ಕೆ ಇರುವ ರಂಭಾಪುರ, ವಿವಿಧ ವಾಹನ ಕಂಪನಿಗಳು, ಬಡಾವಣೆಗಳು, ಪ್ರದೇಶಗಳು, ಹೈಪರ್ ಮಾರ್ಟ್, ಎನ್‌ಎಚ್-51 ಮತ್ತು ವಿವಿಧ ಇಲಾಖೆಗಳಿಗೆ, ಮತ್ತೊಂದೆಡೆ ಪೂರ್ವ ಭಾಗವು ಡಿಸಿ ಕಚೇರಿ, ಜಿಲ್ಲಾ ನ್ಯಾಯಾಲಯಗಳು, ಕೆಇಬಿ, ಆಸ್ಪತ್ರೆಗಳು, ದೇವಸ್ಥಾನಗಳು, ಅನೇಕ ಬಡಾವಣೆಗಳನ್ನು ಹೊಂದಿದ್ದು, ಎರಡು ಭಾಗಕ್ಕೆ ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ. ಸಮಯ ಮತ್ತು ರಾಷ್ಟ್ರೀಯ ಇಂಧನ ಸಹ ಉಳಿತಾಯವಾಗಲಿದೆ ಎಂದರು.

ಪ್ರಸ್ತುತ ಮುಂಬಯಿಂದ ಸೊಲ್ಲಾಪುರವರೆಗೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು ವಿಜಯಪುರವರೆಗೆ ವಿಸ್ತರಣೆ ಮಾಡಬೇಕು. ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಐದು ದಿನ ಓಡಿಸಲು, ಮೈಸೂರು- ಬಾಗಲಕೋಟ ಮಧ್ಯ ಸಂಚರಿಸುವ ಬಸವ ಎಕ್ಸಪ್ರೆಸ್ ರೈಲು ಗದಗ ವರೆಗೆ ವಿಸ್ತರಣೆ ಮಾಡುವುದರಿಂದ ಈ ಭಾಗದ ಪ್ರಯಾಣಿಕರ ಸಂಚಾರಕ್ಕೆ ಹಾಗೂ ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.