ವಿಜಯಪುರ : ಮನುಷ್ಯ ಜೀವನದಲ್ಲಿ ಶರಣರ ಕಾಯಕ ಗುಣ ಬೆಳೆಸಿಕೊಳ್ಳಬೇಕು. ಸತ್ಯ, ಶುದ್ಧ, ಕಾಯಕ ಹಾಗೂ ನೆಮ್ಮದಿಯು ಸಂತೃಪ್ತಿ ನೀಡುತ್ತವೆ ಎಂದು ಚಿಂತಕ ವಿ.ಸಿ. ನಾಗಠಾಣ ಹೇಳಿದರು.
ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಶರಣ ಮಾದಾರ ಧೂಳಯ್ಯನವರ ಕಾಯಕ, ಅನುಭಾವ ಕುರಿತು ಅವರು ಮಾತನಾಡಿದರು.
12ನೇ ಶತಮಾನದಲ್ಲಿ 770 ಅಮರಗಳಂಗರಿದ್ದರು. ಅವರಲ್ಲಿ 250ಕ್ಕಿಂತಲೂ ಹೆಚ್ಚು ದಲಿತ ವರ್ಗದಿಂದ ಬಂದಿದ್ದು, ಅವರಲ್ಲಿ ಮಾದಾರ ಧೂಳಯ್ಯನವರು ಕೂಡ ಒಬ್ಬರು. ಅವರ ಸತ್ಯ, ಶುದ್ಧ, ಕಾಯಕ ನಿಷ್ಠೆ, ನಿರ್ಮಲ ಮನಸ್ಸು, ನಿತ್ಯ ಮಾತಿನ ರೂಪ, ನಿಷ್ಕಲ್ಮಶ ವಿಚಾರ, ಚಪ್ಪಲಿ ಹೊಲಿಯುವ ಕಾಯಕ ಅವರ ವಚನಗಳಲ್ಲಿ ಕಂಡು ಬರುತ್ತದೆ ಎಂದರು.
ಮಾದಾರ ಧೂಳಯ್ಯನವರ ದೃಷ್ಟಾಂತಗಳು ವೈಜ್ಞಾನಿಕವಾದದ್ದು, ಅರ್ಥಗರ್ಭಿತ ವಚನಗಳು ನಿಸ್ವಾರ್ಥ ಬದುಕನ್ನು ಬಾಳಿ ಆದರ್ಶಗಳಿಂದ ನುಡಿದಂತೆ ನಡೆದವರು. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುತ್ತ ಕಾಯಕವೇ ಮೇಲು ಪರಮಾತ್ಮನ ಅವಶ್ಯತೆ ಇಲ್ಲ ಎಂದವರು. ಅವರು ರಚಿಸಿದ 106 ವಚನಗಳು ಸದ್ಯ ಲಭ್ಯವಾಗಿವೆ. ಅವೆಲ್ಲವೂ ಸಮಾಜದ ಒಳತಿಗಾಗಿ ರಚಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿರ್ದೆಶಕ ಜಿ.ಬಿ. ಸಾಲಕ್ಕಿ ಮಾತನಾಡಿದರು. ವಚನ ಸಾಹಿತ್ಯ ಸಂಸತಿ ವೇದಿಕೆ ವತಿಯಿಂದ ಕಾಯಕ ಯೋಗಿ ವಾರ್ಷಿಕ ಪ್ರಶಸ್ತಿ ಪಡೆದ ಹಿನ್ನೆಲೆ ವಿ.ಸಿ. ನಾಗಠಾಣ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಂಗಮೇಶ ಬದಾಮಿ ನಿರೂಪಿಸಿದರು. ವಿದ್ಯಾವತಿ ಅಂಕಲಗಿ ವಂದಿಸಿದರು.
ಮಹಿಳಾ ಟಕದ ಪ್ರಧಾನ ಕಾರ್ಯದರ್ಶಿ ಭಾರತಿ ಭೂಯ್ಯಾರ, ಉಪಾಧ್ಯಕ್ಷ ಸರದೇವ ನಾಡಗೌಡರ, ದೊಡ್ಡಣ್ಣ ಭಜಂತ್ರಿ, ಜಂಬುನಾಥ ಕಂಚ್ಯಾಣಿ, ಎನ್.ಆರ್. ಕುಲಕರ್ಣಿ, ವಿಠಲ ತೇಲಿ, ಕೆ.ಎಫ್. ಅಂಕಲಗಿ, ನೂತನ ಬ್ಯಾಕೋಡ, ಜ್ಯೋತಿ ಬಾಗಲಕೋಟ, ಜಗದೀಶ ಮೋಟಗಿ, ಮಹಾದೇವ ಹಾಲಳ್ಳಿ, ಡಾ. ಸಂಗಮೇಶ ಮೇತ್ರಿ, ಕಾಶೀನಾಥ ಅಣೆಪ್ಪನವರ, ಎಂ.ಎಸ್. ಕರಡಿ, ಶರಣಗೌಡ ಪಾಟೀಲ ಮತ್ತಿತರರಿದ್ದರು.