ಅರಕಲಗೂಡು: ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ಪುಸ್ತಕಗಳು ದಾರಿ ದೀಪವಾಗಿದ್ದು ಪಠ್ಯದ ಜತೆಗೆ ಸಾಧಕರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ. ಕುಶಾಲಾ ಬರಗೂರು ಸಲಹೆ ನೀಡಿದರು.
ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನ ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ಜ್ಞಾನಾರ್ಜನೆ ವೃದ್ಧಿಗೆ ಸಾಧಕರು ಹಾಗೂ ಆದರ್ಶ ವ್ಯಕ್ತಿಗಳ ಸಾಧನೆ ಕುರಿತ ಪುಸ್ತಕಗಳನ್ನು ಓದುವುದು ಅಗತ್ಯ. ಮುಖ್ಯವಾಗಿ ಇಂದು ವಿದ್ಯೆ ಕಲಿಯುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ತಂದೆ-ತಾಯಿ, ನಿಮ್ಮ ಊರು ಹಾಗೂ ಪರಿಸರದಿಂದ ಕಲಿಯುವುದು ಸಾಕಷ್ಟು ಇದೆ. ಇದು ನಿತ್ಯದ ಜೀವನ ಶೈಲಿಯಿಂದ ಕೂಡಿರುತ್ತದೆ. ವಿದ್ಯಾರ್ಥಿಗಳು ಇದನ್ನು ಮನಗಾಣಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನದ ಬೆಳಕು ಪುಸ್ತಕಗಳ ಅಧ್ಯಯನದಿಂದ ಮಾತ್ರ ಸಾಧ್ಯ. ನಮ್ಮ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯನ್ನಾಗಿ ಮಾಡಲು ಪುಸ್ತಕಗಳು ಬಹಳ ಸಹಕಾರಿಯಾಗಿವೆ ಎಂದು ಹೇಳಿದರು.
ಸಾಹಿತಿ ಜ.ನಾ.ತೇಜಶ್ರೀ ಮಾತನಾಡಿ, ವಿದ್ಯಾರ್ಥಿಗಳ ಅಧ್ಯಯನದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಾಗ ಮಾತ್ರ ಉತ್ತರಗಳು ದೊರೆಯುತ್ತವೆ. ಕವಿತೆಗಳನ್ನು ಓದುವುದರಿಂದ ಆತ್ಮಾವಲೋಕನ ಸಾಧ್ಯ. ನಿತ್ಯ ಕೋಮು ಸೌಹಾರ್ದತೆ ಕದಡುವ ಈ ಕಾಲಘಟ್ಟದಲ್ಲಿ ಪುಸ್ತಕಗಳು ಮತ್ತು ಕಾದಂಬರಿಗಳ ಓದು ಅಗತ್ಯ. ಸಮಾಜದಲ್ಲಿ ನಾವೇ ಆದರ್ಶವನ್ನು ನಿರ್ಮಿಸಿಕೊಳ್ಳಬೇಕಾಗಿದೆ. ಓದುವಿಕೆಯಿಂದ ಆತ್ಮಗೌರವ ಬೆಳೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲೆ ಫರ್ಜಾನ್ ಅಂಜುಮ್, ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್, ಡಾ. ಎಂ.ಕುಸುಮಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಸದಸ್ಯ ಗಣೇಶ್ ಶೆಟ್ಟಿ, ಉಪನ್ಯಾಸಕರಾದ ಶಶಿಧರ್, ಬಾಬುವರ್ಧನ್ ಇತರರಿದ್ದರು.
ನಂತರ ಮಕ್ಕಳ ನೆಚ್ಚಿನ ಪುಸ್ತಕಗಳ ಕುರಿತು ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವರ್ಷಾ(ಪ್ರಥಮ), ಮೋನಿಕಾ(ದ್ವಿತೀಯ), ರಮ್ಯಾ (ತೃತೀಯ) ಹಾಗೂ ಹೇಮಾ, ಮೋಹನ ಕುಮಾರಿ, ವಿಜಯ್ ಮತ್ತು ಬಿಂದುಶ್ರೀಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.