ಹುನಗುಂದ: ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯವಶ್ಯವಾಗಿದೆ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಬೇಕೆಂದು ಶಶಿಕಲಾ ಮಠ ಹೇಳಿದರು.
ಪಟ್ಟಣದ ವಿ.ಎಂ.ಎಸ್.ಆರ್. ವಸದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಮಹಾವಿದ್ಯಾಲಯಕ್ಕೆ ಬಂದರೆ ಸಾಲದು ನಿರಂತರ ಅಧ್ಯಯನದೊಂದಿಗೆ ಸಮಾಜಮುಖಿ ಜ್ಞಾನ ಪಡೆದುಕೊಳ್ಳಬೇಕು. ಅದಕ್ಕಾಗಿ ಮಹಾವಿದ್ಯಾಲಯದಲ್ಲಿ ದೊರೆಯುತ್ತಿರುವ ಮೂಲ ಸೌಲಭ್ಯಗಳೊಂದಿಗೆ ಪಠೇತರ ಸೌಲಭ್ಯಗಳಾದ ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮುಂತಾದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸಮಾಜ ರೂಪಿಸುವ ನಾಗರಿಕರಾಗಿ ಬದುಕಬೇಕು ಎಂದು ತಿಳಿಸಿದರು.
ಲೆಫ್ಟಿನೆಂಟ್ ಎಸ್.ಬಿ. ಚಳಗೇರಿ ಮಾತನಾಡಿ, ಆಧುನಿಕ ಸ್ಪರ್ಧಾತ್ಮಕ ಪರೀಕ್ಷೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿವೆ. ಅದಕ್ಕೆ ಎದೆಗುಂದದೆ ಏಕಾಗ್ರತೆಯಿಂದ ಅಧ್ಯಯನ ಮಾಡಿ ಪ್ರಚಲಿತ ಜ್ಞಾನ ಪಡೆದುಕೊಳ್ಳಬೇಕು. ದೈಹಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಸರಸ್ವತಿದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಮಾರಂಭ ಆರಂಭಿಸಲಾಯಿತು. ಪ್ರಾಧ್ಯಾಪಕ ಡಾ.ಎಸ್.ಆರ್. ನಾಗಣ್ಣವರ, ಪ್ರೊ. ಬಿ.ಎ. ಕಂಠಿ, ಪ್ರೊ. ಶ್ರೀನಿಧಿ ಆರ್. ಎ., ಗ್ರಂಥಪಾಲಕ ಶ್ರೀ ಎಂ.ಎಸ್. ದರಗಾದ ಮಾತನಾಡಿದರು.
ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಆನಂದ ತೇಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಎಸ್.ಆರ್. ಗೋಲಗೊಂಡ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸ್ಫೂರ್ತಿ ಹಡಪದ ಪ್ರಾರ್ಥಿಸಿದರು. ಸೋನು ಗೋಟೂರು ಸ್ವಾಗತಿಸಿದರು. ಭಾಗ್ಯಶ್ರೀ ಗೋಲಪ್ಪನವರ ವಂದಿಸಿದರು. ಸುವರ್ಣ ಹೊಸಳ್ಳಿ ನಿರೂಪಿಸಿದರು.