ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಬೆಳೆಸಬೇಕು. ಆರೋಗ್ಯಕರ, ದೈಹಿಕ ಚಟುವಟಿಕೆಗಳನ್ನು ನೀಡಿದಾಗ ಮಕ್ಕಳು ಸದೃಢರಾಗುತ್ತಾರೆ. ಸೋಲು, ಕಷ್ಟ- ನಷ್ಟಗಳನ್ನು ಸ್ವೀಕರಿಸುವ ಮನಸ್ಥಿತಿ ಬೆಳೆಸಬೇಕು ಎಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸಂಸ್ಕೃತ ಅಧ್ಯಾಪಕ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಹಯೋಗದಲ್ಲಿ 7ನೇ ತರಗತಿಯ ಪಾಲಕರಿಗೆ ಶನಿವಾರ ಆಯೋಜಿಸಿದ್ದ ಅಭಿಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ಭಾರತೀಯ ಮೌಲ್ಯಗಳ ಮಹತ್ವ ತಿಳಿಸಿ ಕೊಡುವಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಹಿರಿದಾಗಿದೆ. ಸಕಾರಾತ್ಮಕ ಗುಣಗಳನ್ನು ಗುರುತಿಸಿ ಪ್ರಶಂಸಿಸಿದರೆ ಧನಾತ್ಮಕ ಮನೋಭಾವನೆ ಬೆಳೆಯುತ್ತದೆ ಎಂದರು.
ಪ್ರಾಚಾರ್ಯೆ ರೇಣು ಪಾಟೀಲ, ಸಹ ಸಂಯೋಜಕರಾದ ಕಮಲಾಕ್ಷಿ ಸಣ್ಣಕ್ಕಿ ಹಾಗೂ ಪ್ರಿಯಾ0ಕಾ ದೇಸಾಯಿ ಉಪಸ್ಥಿತರಿದ್ದರು. ಗೀತಾಂಜಲಿ ಹಿರೇಮಠ ನಿರೂಪಿಸಿದರು.