ಹೊಳೆನರಸೀಪುರ: ಮುಂದಿನ ಜನ್ಮದಲ್ಲಿ ದೇವರು ಒಂದು ದುಂಬಿ ಅಥವಾ ಕೋಗಿಲೆಯಾಗಿಯಾದರೂ ಈ ಕನ್ನಡನಾಡಿನಲ್ಲೇ ಜನ್ಮ ತಾಳುವಂತಹ ಭಾಗ್ಯವನ್ನು ಕರುಣಿಸಲಿ ಎಂಬ ಆದಿ ಕವಿ ಪಂಪನ ಮಾತು ಆತನ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ. ಅಂತಹ ಅಭಿಮಾನವನ್ನು ನಾವುಗಳು ಬೆಳೆಸಿಕೊಳ್ಳಬೇಕಿದೆ ಎಂದು ನಗರ ಪೊಲೀಸ್ ಠಾಣೆ ಪಿಎಸ್‌ಐ ಅರುಣ್ ಸಲಹೆ ನೀಡಿದರು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಶನಿವಾರ ತಾಲೂಕು ಛಾಯಾಗ್ರಹಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿ, ಮಾತನಾಡಿದರು. ಇಂದಿನ ಮೊಬೈಲ್ ಯುಗದಲ್ಲಿ ಛಾಯಾಗ್ರಹಕರ ಸವಾಲಿನ ವೃತ್ತಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿ, ಕನ್ನಡ ಭಾಷೆ ಹಾಗೂ ನಾಡಿಗೆ ಅವರು ನೀಡುವ ಗೌರವ ಹಾಗೂ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಪ್ರಶಂಶಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರು ಮಾತನಾಡಿ, 1902 ರಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಕೂಗನ್ನು ಎತ್ತಿ, ಮುನ್ನುಡಿಯನ್ನು ಬರೆದ ಆಲೂರು ವೆಂಕಟರಾಯರು ಅಂದು ಕನ್ನಡ ಭಾಷೆಯ ಬಗ್ಗೆ ತೋರಿದ ವಿಶೇಷ ಕಾಳಜಿಯಿಂದಾಗಿ ಇಂದು ಕನ್ನಡ ಭಾಷೆ ಹಾಗೂ ಕನ್ನಡದ ಸಾಹಿತ್ಯ ವಿಶ್ವದಾದ್ಯಂತ ಪಸರಿಸಿದೆ ಎಂದು ನುಡಿದರು.
ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿ, ಕನ್ನಡ ಭಾಷೆ ನಮ್ಮ ಮಾತೃಭಾಷೆ, ಅದೇ ರೀತಿ ತೆಲಗು, ತಮಿಳು, ಮಲಯಾಳಂ ಹಾಗೂ ಇತರೆ ಭಾಷೆಗಳು ನಮಗೆ ಚಿಕ್ಕಮ್ಮ, ದೊಡ್ಡಮ್ಮ, ಸಂಬಂಧಿಕರು ಇದ್ದಂತೆ. ಅವುಗಳನ್ನು ಗೌರವಿಸುತ್ತಾ ಸಾಗಿದಾಗ ನಮ್ಮ ಸಂಬಂಧಗಳು ಉತ್ತಮವಾಗಿರುತ್ತವೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಮಾಜಿ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ತಾಲೂಕು ಛಾಯಾಗ್ರಹಕರ ಸಂಘ ಅಧ್ಯಕ್ಷ ಧನ್ಯಕುಮಾರ್, ಹಿರಿಯ ಸದಸ್ಯರಾದ ಶಂಕರ್, ವಿನಾಯಕ್, ಕೇಶವ, ನರಸಿಂಹ, ಗೌರವಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಅಶೋಕ್, ಖಜಾಂಚಿ ಸುರೇಶ್, ಸದಸ್ಯರಾದ ಶಾಂತರಾಜು, ಧನಂಜಯ ಪ್ರದೀಪ, ಅಭಿಲಾಷ್, ಅರವಿಂದ, ಪುನೀತ್, ನಾಗರಾಜು ಇತರರಿದ್ದರು.