ಜಿಲ್ಲೆ

ಆಟ, ಪಾಠದತ್ತ ಚಿತ್ತ ಬೆಳೆಸಿಕೊಳ್ಳಿ

Davangere - Desk - Mahesh Babu E

ಪರಶುರಾಮಪುರ: ಮಕ್ಕಳಲ್ಲಿ ಪಠ್ಯ ಕಲಿಕೆ ಪರಿಣಾಮಕಾರಿಯಾಗಲು ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ದೇವೇಂದ್ರಪ್ಪ ಹೇಳಿದರು.

ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಜೀವನ ರೂಪಿಸಿಕೊಳ್ಳಲು ಪಾಠದಷ್ಟೇ ಕ್ರೀಡಾಕೂಟ ಇತರ ಒಳ್ಳೆಯ ಹವ್ಯಾಸಗಳು ಸಹಕಾರಿ ಆಗಲಿವೆ ಎಂದರು.

ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ನಿಯಮಿತವಾಗಿ ಸಹಪಠ್ಯ ಚಟುವಟಿಕೆ ಕೈಗೊಳ್ಳಲು ಗ್ರಾಪಂ ವತಿಯಿಂದ ಸೂಕ್ತ ಸಹಕಾರ ಮತ್ತು ಪ್ರೋತ್ಸಾಹ ನೀಡಿ, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಯೋಜನೆ ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

ಸಮೂಹ ಸಂಪನ್ಮೂಲವ್ಯಕ್ತಿ ವೆಂಕಟೇಶರೆಡ್ಡಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಅವರಲ್ಲಿನ ಸುಪ್ತ ಪ್ರತಿಭೆ ಹೊರಗೆಳೆಯಲು ಇದೊಂದು ಉತ್ತಮ ವೇದಿಕೆ ಆಗಿದ್ದು, ಸ್ಥಳೀಯ ಆಡಳಿತ, ಶಾಲಾ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಕೃಷ್ಣಪ್ಪ ಮಾತನಾಡಿ ನಮ್ಮ ಕಲೆ, ಸಾಹಿತ್ಯವನ್ನು ಉಳಿಸಿ, ಬೆಳೆಸಲು ಪ್ರತಿಭಾ ಕಾರಂಜಿ ಸ್ಪರ್ಧೆ ಸಹಕಾರಿ ಎಂದರು.

ಗ್ರಾಪಂ ಸದಸ್ಯರಾದ ಮಾರುತಿ, ವಿದ್ಯಾವತಿ, ವನಿತಾ, ಆಶಾ ಎಂ.ಸಲುಪಯ್ಯ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೃಷ್ಣಪ್ಪ, ಲೋಲಾಕ್ಷಮ್ಮ ಮಾತನಾಡಿದರು.

ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಎರಡು ಹಂತದಲ್ಲಿ ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಛದ್ಮವೇಶ, ಚಿತ್ರಕಲೆ, ಅಭಿನಯ ಗೀತೆ, ಕ್ಲೇ ಮಾಡಲಿಂಗ್, ಭಕ್ತಿಗೀತೆ, ಆಶುಭಾಷಣ, ಕವನ ಮಿಮಿಕ್ರಿ, ಸಹಪಠ್ಯ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.

ಎಸ್‌ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಸುಧಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಲೋಲಾಕ್ಷಮ್ಮ, ಮುಖ್ಯಶಿಕ್ಷಕ ಎಚ್.ಹನುಮಂತರೆಡ್ಡಿ, ಶಿವಮೂರ್ತಿ, ಶಿಕ್ಷಕರಾದ ಚಿತ್ತಯ್ಯ, ಪಿ.ವಿ.ನರಸಿಂಹಪ್ಪ, ನಿರ್ಮಲಾ, ಪ್ರದೀಪ್, ವಿಜಯಕುಮಾರಿ, ಸುಜಾತಾ, ಶಿವಕುಮಾರಸ್ವಾಮಿ, ಗುರುಲಿಂಗಮ್ಮ, ತ್ರಿವೇಣಿ, ಬಸವರಾಜು, ಅನಿಲ್‌ಕುಮಾರ ಇತರರಿದ್ದರು.

ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಗ್ರಾಮದ ಶಾಲಾ ಸಮಿತಿ, ಸಹಿಪ್ರಾ ಶಾಲೆ ಹಾಗೂ ಡಿಎಸ್‌ಹಳ್ಳಿ ಕ್ಲಸ್ಟರ್ ಕೇಂದ್ರದ ವತಿಯಿಂದ ಕಾರಂಜಿ ಸ್ಪರ್ಧೆ ಆಯೋಜಿಸಲಾಗಿತ್ತು.

ಸುಪ್ತ ಪ್ರತಿಭೆ ಗುರುತಿಸಲು ಸಹಕಾರಿ: ಸರ್ಕಾರಿ ಶಾಲೆಗಳಲ್ಲಿ ಹೆಚ್ಚೆಚ್ಚು ಪಠ್ಯ, ಸಹಪಠ್ಯ ಚಟುವಟಿಕೆ ಆಯೋಜಿಸಿ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತರಲು ಶ್ರಮಿಸಬೇಕು. ಈ ಎಲ್ಲ ಚಟುವಟಿಕೆಗಳಲ್ಲಿ ಮಕ್ಕಳು ತಪ್ಪದೆ ಪಾಲ್ಗೊಳ್ಳುವುದರಿಂದ ಅವರಲ್ಲಿನ ಕ್ರೀಯಾಶೀಲತೆ ಜಾಗ್ರತಗೊಳ್ಳಲಿದೆ. ಈ ಮೂಲಕ ಅವರು ಸಾಧನೆ ಮಾಡಲಿದ್ದಾರೆ.-ಎಚ್.ಹನುಮಂತರೆಡ್ಡಿ, ಮುಖ್ಯಶಿಕ್ಷಕ

ಅಭಿವೃದ್ಧಿಗೆ ಬೇಕು ಸಹಕಾರ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸ ಎಂಬ ಮನೋಭಾವನೆ ನಾವೆಲ್ಲರೂ ತೊರೆಯಬೇಕು. ದೇವಾಲಯದಷ್ಟೇ ಪವಿತ್ರವಾಗಿರುವ ಶಾಲೆಗಳ ಪ್ರಗತಿಗೆ ಸ್ಥಳೀಯ ಶ್ರೀಮಂತರು ಕೈಜೋಡಿಸಬೇಕು. ಈ ಮೂಲಕ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು.-ರಾಜೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷೆ