ಪಂಚನಹಳ್ಳಿ: ಮಕ್ಕಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ಪಂಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಮಕ್ಕಳ ಗ್ರಾಮಸಭೆಯು ಮಕ್ಕಳ ಹಕ್ಕುಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ. ಶೈಕ್ಷಣಿಕ ಹಂತದಲ್ಲಿ ಕಂಡುಬರುವ ಕುಂದು ಕೊರತೆಗಳನ್ನು ಕೇಳುವ ಮನೋಭಾವ ಗುರುತಿಸಿ ಪ್ರಶ್ನೆ ರೂಪದಲ್ಲಿ ಅಧಿಕಾರಿಗಳನ್ನು ಹೇಳುವ ಮನೋಭಾವವನ್ನು ಮಕ್ಕಳ ಮೈಗೂಡಿಸಿಕೊಂಡರೆ ಪ್ರಜ್ಞಾವಂತಿಕೆ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಪ್ರಜಾಪ್ರಭುತ್ವದ ಧ್ವನಿ ಕೇಳಿಸಿಕೊಳ್ಳುವ ಸಭೆಯೇ ಮಕ್ಕಳ ಗ್ರಾಮ ಸಭೆ, ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಸ್ಥಳೀಯ ಆಡಳಿತ ಗಮನಹರಿಸಿ ಮಕ್ಕಳ ಹಕ್ಕುಗಳನ್ನು ದೊರಕಿಸಿಕೊಡುವ ಕಾರ್ಯವಾಗಬೇಕಿದೆ. ಇಲ್ಲಿನ ಸಭೆಗಳು ಕೇವಲ ಸಭೆಯಾಗದೆ ಸಮಸ್ಯೆಗಳಗೆ ಸೂಕ್ತ ಪರಿಹಾರ ಕಲ್ಪಿಸಿಕೊಟ್ಟಾಗ ಸಭೆ ಆಯೋಜನೆ ಯಶಸ್ವಿಯಾಗುತ್ತಿದೆ. ಮಕ್ಕಳ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಪರಿಹಾರ ಒದಗಿಸಬೇಕು. ಅಧಿಕಾರಿಗಳು ಮಕ್ಕಳಿಗೆ ನಿಸ್ಪಕ್ಷಪಾತವಾಗಿ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್ ಮಾತನಾಡಿ, ಶಾಲಾ ಹಂತದಲ್ಲಿ ಉಲ್ಬಣಗೊಳ್ಳುವ ಸಮಸ್ಯೆ ಪರಿಹರಿಸಲು ಮಕ್ಕಳ ಗ್ರಾಮಸಭೆ ಸೂಕ್ತ ವೇದಿಕೆಯಾಗಿದೆ. ಮಕ್ಕಳ ಗ್ರಾಮಸಭೆಯಲ್ಲಿನ ಶೇ.75ರಷ್ಟು ಸಮಸ್ಯೆಗಳಿಗೆ ಗ್ರಾಪಂನಿಂದ ಪರಿಹಾರಕೊಂಡು ಕೊಳ್ಳಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಗೃಹ ನಿರ್ಮಾಣ, ಬಸ್‌ಸೌಲಭ್ಯವನ್ನು ಶೀಘ್ರ ಪರಿಹರಿಸಲಾಗುವುದು ಎಂದರು.