ವಿಜಯಪುರ: ಯುವ ಜನತೆ ಮೊಬೈಲ್ ವ್ಯಾಮೋಹದಿಂದ ಹೊರ ಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯ, ಹಿರಿಯ ಪತ್ರಕರ್ತ ರಫೀ ಭಂಡಾರಿ ಹೇಳಿದರು.
ನಗರದ ಚೇತನಾ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಚೇತನಾ ಬಿಸಿಎ ಮತ್ತು ಬಿಬಿಎ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನಾ ಮೆಚ್ಚಿದ ಪುಸ್ತಕ ವಿದ್ಯಾರ್ಥಿಗಳ ಓದು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳು ನಮ್ಮ ಬದುಕನ್ನು ಸುಸ್ಥಿತಿಗೆ ಕೊಂಡ್ಯೊಯುತ್ತವೆ ಎಂದು ಹೇಳಿದರು.
ಚಿಂತಕ ಅಶೋಕ ಹಂಚಲಿ ಉಪನ್ಯಾಸ ನೀಡಿ, ಪುಸ್ತಕಗಳು ವಾಸ್ತವ ಸತ್ಯವನ್ನು ತಿಳಿಸುತ್ತವೆ. ಅಲ್ಲದೆ, ಓದುಗನ ಕಲ್ಪನೆಗೆ ಮೀರಿದೆ ಬುದ್ದಿ ಭಾವಗಳನ್ನು ಬೆಳಸಿ ಓದುವ ಅಭ್ಯಾಸವನ್ನು ವೃದ್ಧಿಸುತ್ತಿವೆ. ಪುಸ್ತಕ ಓದುವ ಹವ್ಯಾಸದಿಂದ ನಿಮ್ಮ ವ್ಯಕ್ತಿತ್ವ ಧನಾತ್ಮಕವಾಗಿ ಬದಲಾಗಿ ವ್ಯಕ್ತಿತ್ವವೇ ವಿಕಸನವಾಗಲಿದೆ. ಓದುವುದರಿಂದ ಕೇವಲ ಉತ್ತಮ ಶಿಕ್ಷಣ ಒಂದು ನಿರ್ದಿಷ್ಟ ವಿಷಯದ ಜ್ಞಾನ ಹೊಂದುವುದಲ್ಲದೆ, ನಿಮ್ಮಲ್ಲಿ ಹಲವು ಕೌಶಲ್ಯ ಮತ್ತು ವಿಮರ್ಶಾತ್ಮಕ ಚಿಂತನೆಗಳಿಂದ ನಿಮ್ಮ ಮನಸ್ಸು ಸದೃಢಗೊಳ್ಳುತ್ತದೆ ಎಂದರು.
ಪ್ರಾಧಿಕಾರದ ಸದಸ್ಯ, ಡಾ, ಕುಶಾಲ ಬರಗೂರು, ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಮತ್ತು ಅಧ್ಯಕ್ಷತೆ ವಹಿಸಿದ್ದ ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿದರು. ಕಾಲೇಜಿನ ಹಲವು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಪುಸ್ತಕಗಳ ಮಹತ್ವದ ವಿಚಾರಗಳ ಕುರಿತು ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ. ನಾಗರಾಜ ಹೆರಲಗಿ, ಪ್ರಾಚಾರ್ಯ ಎಸ್.ಎ. ಬ್ಯಾಕೋಡ, ಪ್ರಮೋದ ಕುಲಕರ್ಣಿ, ಪಿ.ಜಿ. ಕಾಂಬಳೆ ಮತ್ತಿತರರಿದ್ದರು.