ಜಿಲ್ಲೆ

ಮಾಜಿ ಪ್ರಧಾನಿ ದೇವೇಗೌಡರು ಓದು, ಯೋಗ, ಧ್ಯಾನದಲ್ಲಿ ಮಗ್ನ

ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆ ರಣಕಹಳೆಯನ್ನು ಅತ್ಯಂತ ಹುರುಪಿನಿಂದ ಮೊಳಗಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಓದು, ವಿಶ್ರಾಂತಿಯ ಅಲ್ಪ ವಿರಾಮದಲ್ಲಿದ್ದಾರೆ. ಶಿರಾದಲ್ಲಿ 10 ದಿನ ಕಾಲ ವಾಸ್ತವ್ಯ ಹೂಡಿ ಉಪ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲೂ ದೇವೇಗೌಡರು ನಡುಕ ಹುಟ್ಟಿಸಿದ್ದರು. ಪಕ್ಷದ ಸಣ್ಣ ಸಣ್ಣ ಸಭೆ, ಸಮಾರಂಭಗಳಾದರೂ ಎಂದೂ ಗೈರಾಗದ ದೇವೇಗೌಡರು ಉಪ ಚುನಾವಣೆ ನಂತರ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಪಕ್ಷದ ಪ್ರಮುಖರ ಸಭೆಗೂ ದೇವೇಗೌಡರು ಗೈರಾಗಿದ್ದರು.


ಈಗ ಕಾಲು ನೋವಿನ ಕಾರಣ ಪದ್ಮನಾಭ ನಗರ ನಿವಾಸದಲ್ಲಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಹಲವು ನಾಯಕರ ಕೃತಿಗಳನ್ನು ಓದುತ್ತಿದ್ದಾರೆ. ಸಾಮಾನ್ಯವಾಗಿ ದೇವೇಗೌಡರು ತಮ್ಮೆಲ್ಲ ವಿಶ್ರಾಂತಿ ಅವಧಿಯಲ್ಲಿ ಪುಸ್ತಕಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ, ಈ ಬಾರಿ ಸುದೀರ್ಘ ಅವಧಿ ಮನೆಯಲ್ಲಿದ್ದು, ಅನೇಕ ಪುಸ್ತಕಗಳನ್ನು ಓದುತ್ತಿದ್ದಾರೆ ಎನ್ನಲಾಗಿದೆ.


ಐತಿಹಾಸಿಕ ಕೃತಿಗಳ ಅಧ್ಯಯನ: ಕೇವಲ ಮಹಾನ್ ನಾಯಕರಷ್ಟೇ ಅಲ್ಲ, ಐತಿಹಾಸಿಕ ಕೃತಿಗಳು, ಪ್ರಚಲಿತ ವಿದ್ಯಮಾನಗಳ ಅಧ್ಯಯನವನ್ನೂ ದೇವೇಗೌಡರು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಕಟ್ಟಿ ಬೆಳೆಸಿ ಪ್ರಧಾನಿ ಹುದ್ದೆಗೇರಿದ್ದ ದೇವೇಗೌಡರ ಜ್ಞಾನದ ಹಸಿವು ಎಂತಹವರಿಗೂ ಸ್ಫೂರ್ತಿ. ನಿತ್ಯ ನಾಲ್ಕೈದು ಗಂಟೆ ಕಾಲ ಓದುತ್ತಾರೆ. ಜತೆಗೆ ಯೋಗ, ಪ್ರಾಣಾಯಾಮ ಮಾಡುತ್ತಾರೆ. ತಮ್ಮ 87ನೇ ವಯಸ್ಸಿನಲ್ಲೂ ಎಳೆಯರನ್ನೂ ನಾಚಿಸುವ ಕ್ರಿಯಾಶೀಲತೆಯುಳ್ಳ ದೇವೇಗೌಡರು ತಪ್ಪದೇ ನ್ಯೂಸ್ ಚಾನಲ್‌ಗಳನ್ನು ವೀಕ್ಷಿಸುತ್ತಾರೆ. ಗಂಟೆಗೂ ಹೆಚ್ಚು ಕಾಲ ವರ್ತಮಾನ ಪತ್ರಿಕೆಗಳನ್ನು ಓದುತ್ತಾರೆ. ಪ್ರಧಾನಿ ಮೋದಿ ನಡೆಸಿದ ಸರ್ವ ಪಕ್ಷಗಳ ನಾಯಕರ ವರ್ಚುವಲ್ ಸಭೆಯಲ್ಲೂ ಪಾಲ್ಗೊಂಡು ಸರ್ಕಾರಕ್ಕೆ ಸಲಹೆ ನೀಡುತ್ತಾರೆ. ಹಲವು ರಾಜಕೀಯ ನಾಯಕರೊಂದಿಗೆ ನಿತ್ಯ ದೂರವಾಣಿಯಲ್ಲಿ ಸಂಭಾಷಿಸುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರ ರಾಜಕಾರಣದ ಬಗ್ಗೆ ಮಾಹಿತಿ ವಿನಿಮಯ, ವಿಮರ್ಶೆ, ಪರಾಮರ್ಶೆ ಮಾಡುತ್ತಾರೆ.
ಪ್ರಸ್ತುತ ಬರಾಕ್ ಒಬಾಮ ಅವರ ‘ಎ ಪ್ರಾಮಿಸ್ಡ್​ ಲ್ಯಾಂಡ್, ಶ್ರೀರಾಮ ಕಥಾ ಮಂಜರಿ, ದತ್ತಾತ್ರೇಯ ಮತ್ತಿತರ ಪುಸ್ತಕಗಳ ಓದಿನಲ್ಲಿ ಮಗ್ನರಾಗಿದ್ದಾರೆ. ಪತ್ನಿ ಚನ್ನಮ್ಮ ಅವರ ಜತೆ ನಿತ್ಯ ಪೂಜೆ, ಜಪ, ತಪ, ಧ್ಯಾನದಲ್ಲೂ ತೊಡಗಿಕೊಂಡು ಯುವಕರೂ ನಾಚುವಂತೆ ಕ್ರಿಯಾಶೀಲರಾಗಿದ್ದಾರೆ.