ಮೈಸೂರು: ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್‌ಗೆ ಸಂಬಂಧಿಸಿದ ದಾಖಲೆಯನ್ನು ಪ್ರದರ್ಶಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ಸದಸ್ಯರಿಗೂ ಮುಡಾ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಟೀಕಿಸಿದರು.
ಮೈಸೂರು ಚಲೋ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು ವೇದಿಕೆಯಲ್ಲಿಯೇ ದಾಖಲೆ ಪ್ರದರ್ಶಿಸಿ, ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಅವರ ಅಕ್ಕ ಅವರಿಗೆ ಸಂಬಂಧಿಸಿದ ದಾಖಲೆಯನ್ನು ದೇವೇಗೌಡರ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿರುಚಿ ಕಾಂಗ್ರೆಸ್‌ನವರು ಫ್ಲೆಕ್ಸ್‌ನಲ್ಲಿ ಅಳವಡಿಸಿದ್ದಾರೆ. ದೇವೇಗೌಡರ ಕುಟುಂಬ ಸದಸ್ಯರು ಮುಡಾದಲ್ಲಿ ನಿವೇಶನ ಪಡೆದಿಲ್ಲ ಎಂದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಹಮ್ಮಿಕೊಂಡಿದ್ದ ಪಾದಯಾತ್ರೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದೆ. ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು. ಮುಂದಿನ ದಿನಗಳಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮುಡಾ ಹೋರಾಟದಲ್ಲಿ ಪ್ರತಿಪಕ್ಷಗಳ ಹೋರಾಟಕ್ಕೆ ಗೆಲುವು ಸಿಗಲೇಬೇಕು. ಅಭಿವೃದ್ಧಿ ಕಾರ್ಯ ನಡೆಯಬೇಕು ಎಂದರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಎಚ್.ಕೆ.ಕುಮಾರಸ್ವಾಮಿ ಇತರರು ಇದ್ದರು.
ಸಿದ್ದರಾಮಯ್ಯ ವಿರುದ್ಧದ ಹೋರಾಟವಲ್ಲ
ಮೈಸೂರು: ಬಿಜೆಪಿ-ಜೆಡಿಎಸ್ ಮಾಡುತ್ತಿರುವುದು ಕೇವಲ ಸಿದ್ದರಾಮಯ್ಯ ವಿರುದ್ದ ಹೋರಾಟವಲ್ಲ. ಭ್ರಷ್ಟ ಮುಖ್ಯಮಂತ್ರಿ ವಿರುದ್ಧದ ಹೋರಾಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅಧಿಕಾರದ ದಾಹಕ್ಕಾಗಿ ನಾವು ಹೋರಾಟ ಮಾಡುತ್ತಿಲ್ಲ. ಕಾಂಗ್ರೆಸ್‌ನಿಂದ ಕನ್ನಡಿಗರಿಗೆ ಮಾಡಿರುವ ಅನ್ಯಾಯದ ವಿರುದ್ದದ ಹೋರಾಟವಿದು. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕುವ ಹೋರಾಟವಿದು. ಇದು ಬಡವರ, ದಲಿತರ ಕಲ್ಯಾಣಕ್ಕೆ ಹಣ ನೀಡದ ದರಿದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ನೇತೃತ್ವದ ಈ ದರಿದ್ರ ಸರ್ಕಾರದಿಂದ ಯಾವ ವರ್ಗದ ಜನರೂ ಸಂತೋಷವಾಗಿಲ್ಲ. ರಾಜ್ಯದ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ಸತ್ತ ರೀತಿ ಇದೆ. ವಿರೋಧ ಪಕ್ಷಗಳು ಸವಾಲ್ ಹಾಕಿದರೆ, ನಮಗೆ ಧಮ್ಕಿ ಹಾಕುತ್ತೀರಾ. ವಿರೋಧ ಪಕ್ಷಗಳು ನಿಮ್ಮ ಚಮಚಾಗಿರಿ ಮಾಡಿಕೊಂಡು ಇರಬೇಕಾ? ನಿಮ್ಮ ಭ್ರಷ್ಟಾಚಾರಕ್ಕೆ ಬಹು ಪರಾಕ್ ಹೇಳಿಕೊಂಡು ಇರಬೇಕಾ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿ ಆಗಿ ಅಂತಾರೆ. ಅವರನ್ನು ಕಂಡರೆ ನಿಮಗೇಕೆ ಭಯ. ಯಡಿಯೂರಪ್ಪ ನಾಡು ಕಂಡ ಧೀಮಂತ ಹೋರಾಟಗಾರ. ಅದಕ್ಕೆ ಅವರ ನಿವೃತ್ತಿ ಬಯಸುತ್ತಿದ್ದೀರಾ?. ಯಡಿಯೂರಪ್ಪ ವಿರುದ್ಧ ಸಿಐಡಿ ವರದಿ ಎಂದು 15 ಎಫ್‌ಐಆರ್ ಹಾಕಿಸಿದ್ದೀರಿ. ಅದಕ್ಕೂ ನಾವು ಜಗ್ಗಿಲ್ಲ ಎಂದರು.
ಕಳೆದ 15 ವರ್ಷಗಳಿಂದ ಯಡಿಯೂರಪ್ಪ ವಿರುದ್ದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರು ಯಾವತ್ತಿಗೂ ಹೆದರಿಲ್ಲ. ಸಿದ್ದರಾಮಯ್ಯ ಅವರೇ ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಹೇಳಿಕೆ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.