ನಾರಾಯಣಪುರ ಜಲಾಶಯದ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ನಾಲೆಗೆ ಏ.20 ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಗುರುಗುಂಟಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ)ರಲ್ಲಿ ರೈತ ಸಂಘ ಹಸಿರು ಸೇನೆ ಮುಖಂಡರು ಹಾಗೂ ರೈತರು ಭಾನುವಾರ ರಾತ್ರಿ ಮೇಣದಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷ ಪ್ರಸಾದ ರಡ್ಡಿ, ವಿಜಯಕುಮಾರ ನಾಯಕ, ತಿಪ್ಪಣ್ಣ ಹವಾಲ್ದಾರ್, ಹನುಮಂತ ಹುಲಗಪ್ಪದೊಡ್ಡಿ, ಪ್ರಮುಖರಾದ ರಾಜಾ ಸೋಮನಾಥ ನಾಯಕ, ಪ್ರಸಾದ ರಡ್ಡಿ, ಚನ್ನಯ್ಯಸ್ವಾಮಿ ಇತರರಿದ್ದರು. 
ಜಿಲ್ಲೆ

ಭತ್ತ, ಮೆಣಸಿನಕಾಯಿ ಒಣಗುವ ಆತಂಕ

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಏ.15ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶಾಸಕಿ ಕರೆಮ್ಮ ನಾಯಕ ಹಾಗೂ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ರಾಜ್ಯ ರೈತ ಸಂಘ ಸೋಮವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿತು.

ಬಲದಂಡೆ ನಾಲೆ ನೀರು ನಂಬಿಕೊಂಡು ದೇವದುರ್ಗ ತಾಲೂಕು ಮಾತ್ರವಲ್ಲ, ಲಿಂಗಸುಗೂರು, ರಾಯಚೂರು, ಸಿರವಾರ ತಾಲೂಕಿನ ಹಲವು ಹಳ್ಳಿಗಳ ರೈತರು ಭತ್ತ, ಮೆಣಸಿನಕಾಯಿ ಸೇರಿ ವಿವಿಧ ಬೆಳೆ ಬಿತ್ತನೆ ಮಾಡಿದ್ದಾರೆ. ನವೆಂಬರ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ನೀರು ಬಿಡುವ ಬಗ್ಗೆ ಅವೈಜ್ಞಾನಿಕ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ ಮೆಣಸಿನಕಾಯಿ ಹಾಗೂ ಭತ್ತ ಕಾಳುಕಟ್ಟಿದ್ದು ರಾಶಿಗೆ ಬರುತ್ತಿವೆ. ಇಂಥ ಸಂದರ್ಭದಲ್ಲಿ ಮುಂದಿನ ವಾರ ನಾಲೆಗೆ ನೀರು ಬಂದ್ ಮಾಡುವ ಆತಂಕವಿದೆ. ನೀರು ಬಂದ್ ಮಾಡಿದರೆ ಭತ್ತ, ಮೆಣಸಿನಕಾಯಿ ಸಂಪೂರ್ಣ ಒಣಗಲಿವೆ. ಸಾಲ ಮಾಡಿ ಬೆಳೆದ ಬೆಳೆ ರೈತರ ಕೈ ಸೇರಲು ಏ.15ರವರೆಗೆ ಬಲದಂಡೆ ನಾಲೆಗೆ ನೀರು ಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ ರಾಜ್ಯ ಹೆದ್ದಾರಿ ಬಂದ್‌ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಉಪಾಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು, ಹುಚ್ಚಪೀರ್‌ಸಾಬ್, ಹುಸೇನ್ ಬಾಷಾ, ಉಮಾಪತಿಗೌಡ, ಶಾಂತಮೂರ್ತಿ ಸ್ವಾಮಿ, ಕರೆಪ್ಪ ಆನೂರು ಇತರರಿದ್ದರು.