ದೇವದುರ್ಗ: ಪಟ್ಟಣ ಸೇರಿ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಬೆನ್ನಲ್ಲೇ ಶುಕ್ರವಾರ ರಾತ್ರಿ ಮತ್ತೆ ನಾಲ್ಕು ಕಡೆ ಖದೀಮರು ಕೈಚಳಕ ತೋರಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಇರಾನಿ ಗ್ಯಾಂಗ್ ತಾಲೂಕಿಗೆ ಲಗ್ಗೆ ಇಟ್ಟಿದೆಯಾ ಎಂಬ ಆತಂಕ, ಅನುಮಾನ ಜನರಲ್ಲಿ ಮೂಡಿದೆ.
ಸ್ಥಳೀಯ ಜಹೀರುದ್ದೀನ್ ಪಾಷಾ ವೃತ್ತ ಸಮೀಪದ ಎಸ್‌ಬಿಐ ಶಾಖೆ ಮುಂಭಾಗದಲ್ಲಿ ಶುಕ್ರವಾರ ಹಾಡಹಗಲೇ ಕಳ್ಳತನ ನಡೆದಿದೆ. ಅರಕೇರಾದ ಪ್ರಾಧ್ಯಾಪಕ ಮಂಜುನಾಥ ರಾಠೋಡ್ ಎನ್ನುವರು ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಸ್ಕೂಟಿ ಡಿಕ್ಕಿಯಲ್ಲಿಟ್ಟಾಗ ಗಮನ ಬೇರೆಡೆ ಸೆಳೆದ ಕಳ್ಳರು 1.5 ಲಕ್ಷ ರೂ. ದೋಚಿದ್ದು, ಪ್ರಾಧ್ಯಾಪಕರ ಕುಟುಂಬ ಕಣ್ಣೀರಿಡುತ್ತಿದೆ. ಅಲ್ಲದೆ, ಗಬ್ಬೂರು ಠಾಣೆ ವ್ಯಾಪ್ತಿಯ ರಾಮದುರ್ಗದಲ್ಲೂ ಮನೆಯಲ್ಲಿ ಕಳವಾಗಿದೆ.
ಇನ್ನು ರಾತ್ರಿ 11ಗಂಟೆಗೆ ಶಹಾಪುರ ಮುಖ್ಯರಸ್ತೆಯ ಮೈಲಾರಲಿಂಗೇಶ್ವರ ಟ್ರೇಡರ್ಸ್‌ನಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಇಬ್ಬರು ಕಳ್ಳರು ಬೀಗ ಮುರಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾಲದೆಂಬಂತೆ ಬಸ್ ನಿಲ್ದಾಣ ಸಮೀಪದ ಕಿರಾಣಿ ಅಂಗಡಿಯಲ್ಲಿ 17 ಸಾವಿರ ರೂ. ಹಾಗೂ ವಸ್ತುಗಳನ್ನು, ಶಹಾಪುರ ರಸ್ತೆಯ ಕಬ್ಬಿಣದ ಅಂಗಡಿಯಲ್ಲಿ 50 ಕೆ.ಜಿ. ತಾಮ್ರ, ಕಬ್ಬಿಣ, ವ್ಯಾಪಾರಿ ಖಲೀಲ್ ಎನ್ನುವವರ ಮಾರುತಿ 800 ಕಾರು ಕದ್ದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೀಗೆ ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ತಾಲೂಕಿನ ಜನ ಇರಾನಿ ದರೋಡೆ ಗ್ಯಾಂಗ್ ತಾಲೂಕಿಗೆ ಬಂದಿದೆದೆಯಾ ಎನ್ನುವ ಆತಂಕ ಮನೆಮಾಡಿದೆ. ಒಂದೇದಿನ ನಾಲ್ಕೈದು ಕಡೆ ಕಳ್ಳತನ ನಡೆದಿದೆ. ಕಳ್ಳರು ಸಿಸಿ ಕ್ಯಾಮರಾಗೆ ಕೈ ಮಾಡಿದ್ದು, ಪೊಲೀಸರಿಗೆ ಸವಾಲು ಹಾಕಿದಂತಿದೆ.
ಆರಕ್ಷಕರೇ ಭಾಗಿ?: ದೇವದುರ್ಗ ತಾಲೂಕಿನಲ್ಲಿ ಪದೇಪದೆ ನಡೆಯುವ ಕಳ್ಳತನ ಘಟನೆಗಳ ಹಿಂದೆ ಪೊಲೀಸರ ಕೈವಾಡವಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಜಾಲಹಳ್ಳಿ, ದೇವದುರ್ಗ ಠಾಣೆಯ ಕೆಲ ಪೊಲೀಸರು ಕಳ್ಳರ ಜತೆ ಶಾಮೀಲಾಗಿ ಸಣ್ಣಪುಟ್ಟ ಕಳ್ಳತನ ಕೇಸ್ ಬಗೆಹರಿಸುವ ಹಾಗೂ ದೊಡ್ಡ ಕಳ್ಳತನವಾದರೆ ರಿಕವರಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಗುಮಾನಿ ಇದೆ. ಸಿಸಿ ಕ್ಯಾಮರಾ ಇದ್ದರೂ ಭಯವಿಲ್ಲದೆ ಕಳ್ಳತನ ಮಾಡುತ್ತಿರುವ ಘಟನೆಗಳೇ ಇದಕ್ಕೆ ಪುಷ್ಟಿ ನೀಡಿದಂತಿದೆ.
ಕೋಟ್: ತಡರಾತ್ರಿ ವಿವಿಧೆಡೆ ಕಳ್ಳತನ ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಿಸಿ ಕ್ಯಾಮರಾ ಫುಟೇಜ್ ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು.
ಎಸ್.ಮಂಜನಾಥ, ಪಿಐ, ದೇವದುರ್ಗ