1) ದೇವದುರ್ಗ ತಾಲೂಕು ಕೋಣಚಪ್ಪಳ್ಳಿಯಲ್ಲಿ ನಾಟಿ ಮಾಡಿದ ಭತ್ತ ರಸಗೊಬ್ಬರಕ್ಕಾಗಿ ಕಾಯುತ್ತಿರುವುದು. 2) ದೇವದುರ್ಗ ತಾಲೂಕಿನ ಬೂದಿನಾಳ ಗ್ರಾಮದಲ್ಲಿ ರೈತರು ಬಿತ್ತನೆ ಮಾಡಿದ ಹತ್ತಿ ಬೆಳೆ. 
ಜಿಲ್ಲೆ

ಯೂರಿಯಾ ಬಿಕ್ಕಟ್ಟು ಕೃಷಿಗೆ ಇಕ್ಕಟ್ಟು

ಶಾಮಸುಂದರ್ ಕೊಪ್ಪಳಕರ್

ರಸಗೊಬ್ಬರಕ್ಕಾಗಿ ರೈತರ ಪರದಾಟ ಬಾಯ್ತೆರೆದು ಕುಳಿತಿವೆ ಭತ್ತ, ಹತ್ತಿ, ತೊಗರಿ

ಅಮರೇಶ ಚಿಲ್ಕರಾಗಿದೇವದುರ್ಗ : ತಾಲೂಕಿನ ರೈತರು ರಸಗೊಬ್ಬರ ಆಧಾರಿತ ವಾಣಿಜ್ಯ ಬೆಳೆಗಳ ಮೊರೆ ಹೋಗಿದ್ದು ಯೂರಿಯಾ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಾಟಿ ಮಾಡಿದ ಭತ್ತ, ಹತ್ತಿ, ತೊಗರಿ ಸೇರಿ ವಿವಿಧ ಬೆಳೆಗಳು ಬಾಯ್ತೆರೆದು ಕುಳಿತಿದ್ದು ಸದ್ಯ ರಸಗೊಬ್ಬರ ಸಿಗದಿದ್ದರೆ ಬೆಳೆಗಳು ಹಾಳಾಗಲಿವೆ.

ತಾಲೂಕಿನ ನಾಲ್ಕು ಹೋಬಳಿಯಲ್ಲಿ ಸುಮಾರು 1.10 ಲಕ್ಷ ಹೆಕ್ಟೇರ್ ಭೂಪ್ರದೇಶ ಒಕ್ಕಲುತನಕ್ಕೆ ಒಳಪಟ್ಟಿದೆ. ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಗೆ ಶೇ.70, ಕೃಷ್ಣಾ ನದಿ ನೀರಿನಿಂದ ಸುಮಾರು 10 ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿಗೆ ಒಳಪಟ್ಟಿದೆ. ಶೇ.20 ಮಳೆ ಆಶ್ರಿತ ಖುಷ್ಕಿ ಭೂಮಿಯಾಗಿದೆ. 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತಲಾಗಿದೆ. 35 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, ಐದು ಸಾವಿರ ಹೆಕ್ಟೇರ್‌ನಷ್ಟು ತೊಗರಿ ಸೇರಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.

ನಾರಾಯಣಪುರ ಬಲದಂಡೆ ನಾಲೆಗೆ ಜು.8ರಿಂದ ನೀರು ಹರಿಸಿದ್ದು ಭತ್ತ ನಾಟಿ ಮಾಡಲಾಗಿದೆ. ಜೂನ್‌ನಲ್ಲಿ ಮಳೆ ಉತ್ತಮವಾಗಿದ್ದರಿಂದ ಹತ್ತಿ, ತೊಗರಿ ಬಿತ್ತನೆ ಮಾಡಿದ ಬೆಳೆ 30 ರಿಂದ 40 ದಿನ ಕಳೆದಿವೆ. ಸದ್ಯ ಎರಡು ಸಲ ಕಳೆತೆಗೆದು ಎಡೆ ಹೊಡೆಯಲಾಗಿದೆ. ಆಗಾಗ ಸುರಿಯುವ ಮಳೆಯಿಂದ ಬಹುತೇಕ ಬೆಳೆ ಸಮೃದ್ಧವಾಗಿ ಬಂದಿವೆ. ಸದ್ಯ ಬೆಳೆಗೆ ಗೊಬ್ಬರ ನೀಡುವುದು ಅಗತ್ಯವಿದ್ದು ಯೂರಿಯಾ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಬೇರೆ ಗೊಬ್ಬರ ಲಭ್ಯವಿದ್ದರೂ ಯೂರಿಯಾ ಜತೆ ಬೆರೆಸಿ ಹಾಕಿದರೆ ಬೆಳವಣಿಗೆ ಉತ್ತಮವಾಗಿ ಬರಲಿದೆ ಎನ್ನುವುದು ರೈತರ ಲೆಕ್ಕಾಚಾರವಾಗಿದೆ. ಪಟ್ಟಣದ ಟಿಎಪಿಸಿಎಂಎಸ್ ಹೊರತುಪಡಿಸಿದರೆ ತಾಲೂಕಿನಲ್ಲಿ ಯಾವುದೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗೊಬ್ಬರ ಮಾರಾಟದ ಪರವಾನಗಿ ಪಡೆದಿಲ್ಲ. ಖಾಸಗಿ ಅಂಗಡಿಗಳಲ್ಲೂ ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಸಿಗುತ್ತಿಲ್ಲ. ಖಾಸಗಿ ಕೇಂದ್ರಗಳಲ್ಲಿ ಡಿಎಪಿ, ಎನ್‌ಪಿಕೆಎಸ್, ಎಂಒಪಿ, 20-20-20, ಎಫ್‌ಒಎಂ ಸೇರಿ ವಿವಿಧ ಗೊಬ್ಬರ ಲಭ್ಯವಿದೆ. ಆದರೆ, ಯೂರಿಯಾ ಮಿಶ್ರಣವಿಲ್ಲದೆ ಬೇರೆ ಗೊಬ್ಬರ ಹಾಕಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಕೃಷಿ ಇಲಾಖೆ ರಸಗೊಬ್ಬರ ಪೂರೈಸುವ ಏಜೆನ್ಸಿ ಹಾಗೂ ಇಲಾಖೆಗೆ ಬೇಡಿಕೆ ಪ್ರಸ್ತಾವನೆ ಸಲ್ಲಿಸಿದೆ. ಕೆಲದಿನಗಳ ಹಿಂದೆ 100 ಟನ್ ಯೂರಿಯಾ, 32 ಟನ್ ಡಿಎಪಿ ಮಾತ್ರ ಪೂರೈಕೆಯಾಗಿದೆ. ಟಿಎಪಿಸಿಎಂಎಸ್ ಮೂಲಕ ಪ್ರತಿ ರೈತನಿಗೆ ಕೇವಲ ಎರಡು ಚೀಲ ಯೂರಿಯಾ ನೀಡಲಾಗಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಕೆಲ ಖಾಸಗಿ ಅಂಗಡಿಗಳಲ್ಲಿ ಗೊಬ್ಬರವಿದ್ದರೂ ದುಬಾರಿ ಬೆಲೆಗೆ ಒಂದೆರಡು ಚೀಲ ಮಾತ್ರ ನೀಡುತ್ತಿದ್ದಾರೆ. ಇದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ರೈತರು ಹಣ ಕೈಯಲ್ಲಿಡಿದು ಓಡಾಡಿದರೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಬೇರೆ ರಸಗೊಬ್ಬರವಿದ್ದರೂ ಯೂರಿಯಾ ಇಲ್ಲದೆ ಬೆಳೆಗೆ ಹಾಕಲು ಬರಲ್ಲ. ಇದರಿಂದ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಕಳೆದವರ್ಷ ನೀರಿನ ಕೊರತೆ, ಬೆಲೆ ಇಳಿಕೆಯಿಂದ ತತ್ತರಿಸಿದ ರೈತರಿಗೆ ಈ ವರ್ಷ ಗೊಬ್ಬರ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ತುರ್ತಾಗಿ ಯೂರಿಯಾ ಗೊಬ್ಬರ ಪೂರೈಸಬೇಕು. | ಸಂಗನಗೌಡ ಅಣೇರ್ ಕೋಣಚಪ್ಪಳಿ ರೈತ ದೇವದುರ್ಗ ತಾಲೂಕಿನಲ್ಲಿ ಯೂರಿಯಾ ಸೇರಿ ರಸಗೊಬ್ಬರ ಬೇಡಿಕೆ ಹೆಚ್ಚಿದೆ. ಟಿಎಪಿಸಿಎಂಎಸ್ ಹೊರತುಪಡಿಸಿ ಯಾವುದೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪರವಾನಗಿ ಪಡೆದಿಲ್ಲ. ಕೆಲದಿನಗಳ ಹಿಂದೆ 100ಟನ್ ಯೂರಿಯಾ, 32ಟನ್ ಡಿಎಪಿ ರೈತರಿಗೆ ವಿತರಣೆ ಮಾಡಲಾಗಿದೆ. ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. | ಶ್ರೀನಿವಾಸ್ ನಾಯಕ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ