ದೇವದುರ್ಗದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಆಯೋಜಿಸಿದ್ದ ಹತ್ತಿ ಬೆಳೆಗಾರರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ರೈತರಿಗೆ ಕೃಷಿ ಪರಿಕರ ವಿತರಿಸಲಾಯಿತು. ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಜಯಪ್ರಕಾಶ ನಿಡಗುಂದಿ, ಕೀಟಶಾಸ್ತ್ರಜ್ಞರಾದ ಡಾ.ಕೃಷ್ಣ ಬಿರಾದಾರ ಪಾಟೀಲ್, ಡಾ.ಬಿ.ಹಂಚಿನಾಳ, ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ ಇದ್ದರು. 
ಜಿಲ್ಲೆ

ರೈತರು ವಿಜ್ಞಾನಿಗಳ ಸಲಹೆ ಪಡೆಯಲಿ

ಶ್ರೀನಾಥ

ದೇವದುರ್ಗ: ಒಕ್ಕಲುತನ ಇಂದು ಆಧುನಿಕತೆ ಹಾಗೂ ವೈಜ್ಞಾನಿಕ ತಳಹದಿ ಮೇಲೆ ನಡೆಯುತ್ತಿದ್ದು, ರೈತರು ಅದಕ್ಕೆ ತಕ್ಕಂತೆ ಬದಲಾಗಬೇಕು ಮತ್ತು ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿಯ ಸಹ ಸಂಶೋಧನಾ ನಿರ್ದೇಶಕ ಜಯಪ್ರಕಾಶ ನಿಡಗುಂದಿ ಹೇಳಿದರು.

ಪಟ್ಟಣದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಹಾಗೂ ಬುಡಕಟ್ಟು ಉಪಯೋಜನೆಯಡಿ ಶನಿವಾರ ಆಯೋಜಿಸಿದ್ದ ಹತ್ತಿ ಬೆಳೆಗಾರರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಮತ್ತು ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಂದ್ರ ಬೇಸಾಯ ಮಾಡಲು ಅಗತ್ಯವಿರುವ ಹೈಬ್ರಿಡ್ ತಳಿಗಳು ಹಾಗೂ ಬೀಜಗಳನ್ನು ಸಕಾಲಕ್ಕೆ ನಾಟಿ ಮಾಡಬೇಕು. ಇದರಿಂದ ಶೇ.25 ಸಾರಜನಕ, ಪೊಟ್ಯಾಷ್ ಮತ್ತು ಶೇ.75 ನೈಟ್ರೋಜನ್ ಹಾಗೂ ಶೇ.100 ರಂಜಕ ಗೊಬ್ಬರ ನೀಡಬೇಕು. ಈ ರಸಗೊಬ್ಬರ ಬೆಳೆಗಳು 30, 60, 90 ದಿನಗಳಿದ್ದಾಗ ಸಮನಾಗಿ ನೀಡಬೇಕು ಎಂದರು.

ಕೀಟಶಾಸ್ತ್ರಜ್ಞ ಡಾ.ಕೃಷ್ಣ ಬಿರಾದಾರ ಪಾಟೀಲ್ ಮಾತನಾಡಿ, ಸರಿಯಾದ ಸಮಯಕ್ಕೆ ಬಿತ್ತನೆ, ಸರಿಯಾದ ತಳಿಗಳ ಆಯ್ಕೆ, ಬೀಜೋಪಚಾರ, ವರ್ಷಕ್ಕೊಮ್ಮೆ ಆಳವಾದ ಉಳುಮೆ ಮಾಡುವುದರಿಂದ ಭೂಮಿಯಲ್ಲಿರುವ ಕೀಟಗಳ ಕೋಶ, ರೋಗದ ಅವಶೇಷ ಹಾಗೂ ಕಳೆ ನಿಯಂತ್ರಣ ಮಾಡಬಹುದು.

ಗುಲಾಬಿ ಕಾಯಿಕೊರಕ ಕೀಟದ ಹತೋಟಿಗೆ ಮೋಹಕ ಬಲೆ, ಹಳದಿ ಅಂಟಿನ ಬಲೆ ಅಳವಡಿಸಬೇಕು. ಹತ್ತಿ ಬಿಡಿಸುವುದು ಮುಗಿದ ಕೂಡಲೇ ಗಿಡ ಕಟಾವು ಮಾಡಿ ಮಣ್ಣಿನಲ್ಲಿ ಬೆರೆತುಕೊಳ್ಳುವಂತೆ ಮಾಡಿದರೆ ಫಲವತ್ತತೆ ಕಾಪಾಡಬಹುದು ಎಂದರು.

ಎಐಸಿಆರ್‌ಪಿ ಹತ್ತಿ ವಿಭಾಗದ ಕೀಟಶಾಸ್ತ್ರಜ್ಞ ಡಾ.ಬಿ.ಹಂಚಿನಾಳ, ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ, ರೈತರಾದ ಶಾಂತರೆಡ್ಡಿ, ಶಂಭುಲಿಂಗ ಪ್ರಸಾದ್ ಇತರರಿದ್ದರು.