ದೇವದುರ್ಗದ ಶ್ರೀ ಅಯ್ಯಪ್ಪಸ್ವಾಮಿ ಏರಿಯಾದಲ್ಲಿ ಮಳೆ ನಡುವೆ ಚರಂಡಿ ಕಾಮಗಾರಿ ಮಾಡುತ್ತಿರುವ ಕಾರ್ಮಿಕರು. 
ಜಿಲ್ಲೆ

ಮಳೆಯಲ್ಲಿ ಒಳಚರಂಡಿ ಕಾಮಗಾರಿ

ಶಾಮಸುಂದರ್ ಕೊಪ್ಪಳಕರ್

ಅಮರೇಶ ಚಿಲ್ಕರಾಗಿ

ದೇವದುರ್ಗ: ಪಟ್ಟಣದಲ್ಲಿ ನಿರಂತರ ಮಳೆ ನಡುವೆಯೇ ಒಳಚರಂಡಿ ಕಾಮಗಾರಿ ಕೈಗೊಂಡಿದ್ದು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಅಲ್ಲದೆ ಕಾಮಗಾರಿ ಗುಣಮಟ್ಟದ ಬಗ್ಗೆ ಖಾತ್ರಿ ಇಲ್ಲದಂತಾಗಿದೆ.

ಒಂದೆಡೆ ವಾರದಿಂದ ಬೆಂಬಿಡದೆ ಮಳೆ ಸುರಿಯುತ್ತಿದ್ದು ಇದರ ನಡುವೆ ಪಟ್ಟಣದ ಮೂರನೇ ವಾರ್ಡ್ ವ್ಯಾಪ್ತಿಯ ಭಾರತ್ ಟಾಕೀಸ್‌ನಿಂದ ಶ್ರೀ ಅಯ್ಯಪ್ಪ ಸ್ವಾಮಿ ಏರಿಯಾದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಚರಂಡಿಗಾಗಿ ಜೆಸಿಬಿಯಿಂದ ರಸ್ತೆ ಒಂದು ಭಾಗಕ್ಕೆ ಮೂರಡಿ ತಗ್ಗು ತೋಡಲಾಗಿದೆ. ರಸ್ತೆ ಅಕ್ಕಪಕ್ಕದಲ್ಲಿ ಮಣ್ಣು ಹಾಕಿದ್ದು ನಿತ್ಯ ಮಳೆ ಸುರಿಯುತ್ತಿರುವುದರಿಂದ ಮಣ್ಣು ರಸ್ತೆಯೆಲ್ಲ ಹರಡಿಕೊಂಡು ಸಂಚಾರಕ್ಕೆ ಸಂಕಟ ಎದುರಾಗಿದೆ.

ತಗ್ಗಿನಲ್ಲಿ ನಿಂತಿರುವ ನೀರು ತೆರವು ಮಾಡದೆ ಕಾಂಕ್ರಿಟ್ ಹಾಕಲಾಗುತ್ತಿದ್ದು, ಕೇಳುವವರಿಲ್ಲ ಎನ್ನುವ ಸ್ಥಿತಿಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಯ ನಡುವೆ ನಿಂತ ಚರಂಡಿ ನೀರಿನಲ್ಲಿ ಸಿಮೆಂಟ್ ಹಾಕಿ ಗೋಡೆ ಸ್ಲಾಬ್ ನಿರ್ಮಿಸಲಾಗುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದ್ದು ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಒಂದೆಡೆ ನೀರು ನಿಂತಕಡೆ ಕೆಲಸ ಮಾಡುತ್ತಿದ್ದರೆ ಇನ್ನೊಂದೆಡೆ ಮಳೆಯಲ್ಲಿ ಸಿಮೆಂಟ್ ಕಲಿಸಿ ಬೇಕಾಬಿಟ್ಟಿ ಚರಂಡಿಗೆ ಹಾಕಲಾಗುತ್ತಿದೆ.

ಸುಮಾರು 100 ಮೀ. ಉದ್ದ ಚರಂಡಿ ತಗ್ಗು ಅಗೆದಿದ್ದು ನಿತ್ಯ ಮಳೆ ಬರುತ್ತಿರುವ ಕಾರಣ ನೀರು ನಿಲ್ಲುತ್ತಿದೆ. ಅಲ್ಲದೆ ಚರಂಡಿ ನೀರು ಇದಕ್ಕೆ ಸೇರುತ್ತಿದೆ. ನೀರನ್ನು ಪಂಪ್‌ಸೆಟ್‌ನಿಂದ ಹೊರಹಾಕದೆ ರಸ್ತೆಯನ್ನು ಬೇಕಾಬಿಟ್ಟಿಯಾಗಿ ತೋಡಿ ನೀರು ಹರಿಸಲಾಗಿದೆ. ಚರಂಡಿ ನೀರು ಹೊರಹಾಕಲು, ಮುಖ್ಯರಸ್ತೆಯಲ್ಲಿ ಕಾಲುವೆ ತೋಡಿ ನೀರು ಮುಂದಕ್ಕೆ ಹರಿಸಲಾಗುತ್ತಿದೆ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಬೈಕ್ ಸವಾರರು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿಯಿದೆ. ಕೆಲವು ಸಲ ಜಾರಿ ಬಿದ್ದ ಉದಾಹರಣೆಗಳೂ ಇವೆ. ಚರಂಡಿಗೆ ತಗ್ಗು ತೋಡಿದ್ದರಿಂದ ಜನರು ಮನೆಗಳಿಗೆ ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ನಡುವೆ ಮಳೆಯಲ್ಲಿ ಕಾಮಗಾರಿ ಮಾಡುತ್ತಿದ್ದರೂ ಸಂಬಂಧಿಸಿದ ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಅಯ್ಯಪ್ಪಸ್ವಾಮಿ ಏರಿಯಾದಲ್ಲಿ ಚರಂಡಿ ಮಣ್ಣು ರಸ್ತೆಗೆ ಹಾಕಿದ್ದರಿಂದ ಬೈಕ್ ಸವಾರ ಸರ್ಕಸ್ ಮಾಡುತ್ತಿರುವುದು.

ಭಕ್ತರಿಗೆ ಸಮಸ್ಯೆ

ಸದ್ಯ ಶ್ರಾವಣ ಮಾಸವಿದ್ದು ನಿತ್ಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನವಿದ್ದು ಭಕ್ತರು ದರ್ಶನಕ್ಕೆ ಬರುತ್ತಾರೆ. ಚರಂಡಿ ತೋಡಿದ ಮಣ್ಣನ್ನು ರಸ್ತೆಗೆ ಹಾಕಲಾಗಿದೆ. ಮಳೆಬಂದು ರಸ್ತೆ ಕೆಸರು ಗದ್ದೆಯಂತಾಗಿದ್ದು, ಓಡಾಡಲು ಸಮಸ್ಯೆಯಾಗುತ್ತಿದೆ. ಏರಿಯಾದ ಜನರು ಬೇರೆಕಡೆ ಹೋಗಲು ಸಾಹಸ ಪಡುವಂತಾಗಿದೆ. ಇಲ್ಲಿ ಶಾಲೆಗಳಿದ್ದು ಮಕ್ಕಳು ಸರ್ಕಸ್ ಮಾಡಿಕೊಂಡು ಹೋಗುವ ಸ್ಥಿತಿಯಿದೆ. ಈ ಭಾಗದ ಜನರು ಸಮೀಪದ ಅಂಬಾಭವಾನಿ, ಆಂಜನೇೀಯ ದೇವಸ್ಥಾನಕ್ಕೆ ಕೆಸರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿಯಿದೆ.

ಮಳೆಯಲ್ಲೇ ಚರಂಡಿ ನಿರ್ಮಾಣ ಕೆಲಸ ಕಳಪೆಯಾಗಿ ಮಾಡಲಾಗುತ್ತಿದ್ದು ನಿಂತ ನೀರಿನಲ್ಲಿ ಸಿಮೆಂಟ್ ಕಲಿಸಿ ಹಾಕುತ್ತಿದ್ದಾರೆ. ಗುತ್ತಿಗೆದಾರರು ಆಡಿದ್ದೇ ಆಟ ಎನ್ನುವಂತಾಗಿದೆ. ಮಣ್ಣು ರಸ್ತೆಗೆ ಹಾಕಿದ್ದು ಮಳೆಯಿಂದ ಕೆಸರುಮಯವಾಗಿದೆ. ಪಾದಚಾರಿ, ಬೈಕ್ ಸವಾರರು ಎಚ್ಚರಿಕೆಯಿಂದ ಓಡಾಡಬೇಕಿದೆ. ಅಧಿಕಾರಿಗಳು ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಬೇಕು. | ವಿಶ್ವನಾಥರೆಡ್ಡಿ ಕಾಲನಿ ನಿವಾಸಿ ಭಾರತ್ ಟಾಕೀಸ್‌ನಿಂದ ಅಯ್ಯಪ್ಪಸ್ವಾಮಿ ದೇವಸ್ಥಾನವರೆಗೆ ಮುಖ್ಯರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದೇನೆ. ಮಳೆ ಬರುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಮಳೆಯಲ್ಲಿ ಕೆಲಸ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇನೆ. | ಕೆ.ಹಂಪಯ್ಯ ಪುರಸಭೆ ಮುಖ್ಯಾಧಿಕಾರಿ, ದೇವದುರ್ಗ