ದೇವದುರ್ಗ: ಸಮಸ್ಯೆಗಳನ್ನು ಎದುರಿಸುವ ಶಕ್ತಿ ಹಾಗೂ ಆತ್ವವಿಶ್ವಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಆಯುಷ್ ವೈದ್ಯಾಧಿಕಾರಿ ನಿರ್ಮಲಾದೇವಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಪ್ರತಿವಷರ್ ಜಗತ್ತಿನಲ್ಲಿ 8ಲಕ್ಷ ಜನರು ಆತ್ಮಹತ್ಯಗೆ ಶರಣಾಗುತ್ತಾರೆ. ಇದರಲ್ಲಿ ಶೇ.17ರಷ್ಟು ಪಾಲು ಭಾರತದ್ದು. ನೊಂದ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸುವುದನ್ನು ತಡೆಗಟ್ಟಿ ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಒತ್ತಡದ ಜೀವನದಲ್ಲಿ ಮಾನಸಿಕ ಖಿನ್ನತೆ ಸಹಜವಾಗಿದ್ದು ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ವ್ಯಕ್ತಿಯನ್ನು ಗುರುತಿಸಿ ಸಾಂತ್ವನ ಮಾತುಗಳನ್ನು ಹೇಳಿ ಜೀವನದ ಅನುಭವದ ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸಬೇಕಿದೆ. ಪ್ರತಿಯೊಂದು ಸಮಸ್ಯೆ ಹಾಗೂ ಪ್ರಶ್ನೆಗೆ ಉತ್ತರವಿರುವುದಿಲ್ಲ. ಆದರೆ ಇಂಥ ಸಂದರ್ಭಗಳಲ್ಲಿ ಕೇವಲ ಆತ್ಮಸ್ಥೈರ್ಯ, ಧೈರ್ಯ ಹೆಚ್ಚಿಸುವ ಶಬ್ದಗಳ ಮೂಲಕ ನೊಂದ ವ್ಯಕ್ತಿಯ ಜೀವನವನ್ನು ಬದಲಾಯಿಸಬಹುದು. ಏಕಾಂಗಿತನ, ವಿಷಯಗಳನ್ನು ಮುಚ್ಚಿಡುವುದು ಹಾಗೂ ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ ಇವುಗಳೆಲ್ಲವೂ ಆತ್ಮಹತ್ಯೆಗೆ ಎಚ್ಚರಿಕೆಯ ಗಂಟೆಗಳಿದ್ದಂತೆ ಎಂದರು.