ಜಿಲ್ಲೆ

ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ

ದೇವರಹಿಪ್ಪರಗಿ: ಲಾಕ್‌ಡೌನ್ ಹಿನ್ನೆಲೆ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ 530ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಪೂರ್ವದಲ್ಲಿ ಅವರು ಮಾತನಾಡಿದರು.
ರಾಜಕೀಯವಾಗಿ ಜನ್ಮ ನೀಡಿ ಎರಡು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ ಪಟ್ಟಣದ ಜನತೆಯ ಋಣ ನನ್ನ ಮೇಲಿದ್ದು, ಕರೊನಾ ಸಂದಿಗ್ಧತೆ ಸಮಯದಲ್ಲಿ ಅವರ ಕಷ್ಟಗಳಿಗೆ ನೆರವಾಗುವುದು ನನ್ನ ಕರ್ತವ್ಯ ಹಾಗೂ ಪತ್ನಿ ಮಹಾದೇವಿಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಎಲ್ಲ ಸಮುದಾಯಗಳ ಒಟ್ಟು 1500 ಬಡಕುಟುಂಬಗಳಿಗೆ ನನ್ನ ಕೈಲಾದಷ್ಟು ನೆರವು ನೀಡಲು ನಿಶ್ಚಯಿಸಿ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಲಾಗಿದೆ ಎಂದರು. ನಂತರ ಪೊಲೀಸ್ ಸಿಬ್ಬಂದಿ, ತಾಂಡಾ, ಗಂಗಾನಗರ ಹಾಗೂ ಬಸ್ ನಿಲ್ದಾಣದ ಬಳಿಯ ಪ್ರದೇಶಗಳಿಗೆ ಪತ್ನಿ ಸಮೇತರಾಗಿ ತೆರಳಿ ಕಿಟ್ ವಿತರಿಸಿದರು.
ಕೆಸರಟ್ಟಿ ಶಂಕರಲಿಂಗಮಠದ ಸ್ವಾಮೀಜಿ, ತಹಸೀಲ್ದಾರ್ ವೈ.ಬಿ. ನಾಗಠಾಣ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಪಿಎಸ್‌ಐ ಸುರೇಶ ಗಡ್ಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ರಿಯಾಜ್ ಯಲಗಾರ ಡಾ. ಗುರುರಾಜ್ ಗಡೇದ, ಬಷೀರ್‌ಸೇಠ್ ಬೇಪಾರಿ ಸೇರಿ ಸಾಹೇಬಗೌಡ ವಣಿಕ್ಯಾಳ, ಮಲ್ಲು ಜಮಾದಾರ, ಪ್ರವೀಣ ಹುಗ್ಗಿ, ಮುರ್ತುಜಾ ತಾಂಬೋಳಿ ಮತ್ತಿತರರಿದ್ದರು.