ಜಿಲ್ಲೆ

ವೈಭವಯುತ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವೈಭವಯುತವಾಗಿ ನೆರವೇರಿತು. ಸುಡುಬಿಸಿಲು ಲೆಕ್ಕಿಸದೇ ಸಹಸ್ರಾರು ಭಕ್ತರು ಸ್ವಾಮಿಯ ಉತ್ಸವಕ್ಕೆ ಸಾಕರಿಸಿದರು.

ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆದ ಜಾತ್ರೆಯಲ್ಲಿ ಮಧ್ಯಾಹ್ನ 1ಕ್ಕೆ ಕರಿಗಿರಿ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮುನ್ನ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಹೋಮದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಆಗಸದಲ್ಲಿ ಗರುಡ ದರ್ಶನ ನೀಡಿದ ನಂತರ ಭಕ್ತರ ಪರಾಕಾಷ್ಟೆ ಮುಗಿಲುಮುಟ್ಟುತ್ತಿದ್ದಂತೆ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ನಾಡಿನೆಲ್ಲಡೆಯಿಂದ ಬಂದಿದ್ದ ಭಕ್ತರು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದು ಬಾಳೆಹಣ್ಣು ದವನ ತೂರಿ ಭಕ್ತಿಯಲ್ಲಿ ಮಿಂದೆದ್ದರು.

ಸುಸಜ್ಜಿತ ರಥದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕೂರಿಸಿ ದೇವಸ್ಥಾನದ ಮುಂಭಾಗದ ತೇರುಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಜನರ ನೂಕುನುಗ್ಗಲು ತಪ್ಪಿಸಲು ಹಾಗೂ ದೇವರ ದರ್ಶನಕ್ಕೆ ಯಾವುದೇ ರೀತಿಯಲ್ಲು ಅನಾನುಕೂಲವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ಬ್ರಹ್ಮರಥೋತ್ಸವದಲ್ಲಿ ಸಹಸ್ರಾರು ಭಕ್ತರು ಬರುವುದನ್ನು ನಿರೀಕ್ಷಿಸಿದ್ದ ಜಿಲ್ಲಾಡಳಿತ ಜಾತ್ರೆಗೆ ಬಂದಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಮೂಲಭೂತ ವ್ಯವಸ್ಥೆ ಮಾಡಿತ್ತು.

ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಕೊಪ್ಪಲು ಹಾಕಿಕೊಂಡಿದ್ದ ಭಕ್ತರು ಪಾನಕ, ಮಜ್ಜಿಗೆ ನೀಡಿ ಅವರ ದಣಿವನ್ನು ತಣಿಸಿದರು. ಹಾಗೆಯೇ ದೇವಾಲಯದ ವತಿಯಿಂದಲೂ ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

50 ಸಾರಿಗೆ ಬಸ್​ ಸೇವೆ: ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಬೆಂಗಳೂರು, ತುಮಕೂರು, ಕೊರಟಗೆರೆ ಹಾಗೂ ಊರ್ಡಿಗೆರೆ ಭಾಗದಿಂದ ವಿಶೇಷ ಸಾರಿಗೆ ಬಸ್​ ಸೇವೆ ಕಲ್ಪಿಸಲಾಗಿತ್ತು. ತುಮಕೂರು ನಿಲ್ದಾಣದಿಂದ ನಿರಂತರವಾಗಿ ಸಾರಿಗೆ ಸೇವೆಯನ್ನು ಬೆಳಗಿನಿಂದ ಸಂಜೆವರೆಗೆ ಒದಗಿಸಲಾಗಿತ್ತು.

ಪೊಲೀಸರ ನಿಯೋಜನೆ: ಜಾತ್ರೆಯ ಅಂಗವಾಗಿ ನೂರಕ್ಕು ಹೆಚ್ಚು ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿತ್ತು. ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಖಾಸಗಿ ಸೆಕ್ಯೂರಿಟಿ ಗಾರ್ಡ್​ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಇದ್ದರು. ಯಾವುದೇ ಅಹಿತಕರ ಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಅಪರ ಜಿಲ್ಲಾಧಿಕಾರಿ ಡಾ. ಎನ್​. ತಿಪ್ಪೇಸ್ವಾಮಿ, ತಹಸೀಲ್ದಾರ್​ ರಾಜೇಶ್ವರಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್​.ಟಿ. ಸುನೀಲ್​ಕುಮಾರ್​ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.