ಜಿಲ್ಲೆ

ದೇವರಾಜ ಮಾರುಕಟ್ಟೆ ಸಂರಕ್ಷಣೆ ಅನುದಾನ ಬೇರೆ ಕಾಮಗಾರಿಗೆ ಬಳಕೆ

ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ‘ಲ್ಯಾನ್ಸ್‌ಡೌನ್’ ಸಂರಕ್ಷಣೆಗೆ ಬಿಡುಗಡೆಯಾಗಿದ್ದ 1.51 ಕೋಟಿ ರೂ.ಗಳನ್ನು ನಗರ ಪಾಲಿಕೆಯು ನಗರೋತ್ಥಾನ 3ನೇ ಹಂತದ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿದ್ದು, ಈ ಎರಡು ಪಾರಂಪರಿಕ ಕಟ್ಟಡಗಳು ಸಂರಕ್ಷಣೆ ಭಾಗ್ಯ ಕಾಣುವುದು ಅನುಮಾನವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ಸಂರಕ್ಷಿಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಈ ಕಟ್ಟಡದ ವಿಚಾರ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಅಡ್ಡಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಕಟ್ಟಡಗಳ ಅಭಿವೃದ್ಧಿಗೆ ಈ ಹಿಂದೆ ಸರ್ಕಾರ ಬಿಡುಗಡೆ ಮಾಡಿದ್ದ 1.51 ಕೋಟಿ ರೂ.ಗಳನ್ನು ನಗರೋತ್ಥಾನ 3ನೇ ಹಂತದ ಕಾಮಗಾರಿಗಳಿಗೆ ಬಳಕೆ ಮಾಡಿಕೊ ಂಡು ಇದೀಗ ಸರ್ಕಾರದಿಂದ ಘಟನೋತ್ತರ ಮಂಜೂರಾತಿ ಪಡೆದುಕೊಂಡಿದೆ.

ನಗರ ಪಾಲಿಕೆಯು ಈ ಎರಡು ಕಟ್ಟಡಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸುವ ಕುರಿತು ತೀರ್ಮಾನ ಕೈಗೊಂಡಿತ್ತು. ನಗರ ಪಾಲಿಕೆಯ ಈ ತೀರ್ಮಾನಕ್ಕೆ ಜಿಲ್ಲಾ ಪಾರಂಪರಿಕ ಸಮಿತಿ ಸಹಮತ ವ್ಯಕ್ತಪಡಿಸಿತ್ತು. ಹಾಗಾಗಿ ಈ ಎರಡು ಪಾರಂಪರಿಕ ಕಟ್ಟಡಗಳ ಅಳಿವು, ಉಳಿವು ಸರ್ಕಾರದ ಕೈಯಲ್ಲಿತ್ತು. ಕಡೆಗೂ ಸರ್ಕಾರ ಈ ಕಟ್ಟಡಗಳ ಸಂರಕ್ಷಣೆಗೆ ಮನಸ್ಸು ಮಾಡಿತ್ತಾದರೂ ಇದೀಗ ಈ ಅನುದಾ ನವನ್ನು ಬೇರೆ ಕಾಮಗಾರಿಗೆ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಈ ಕಟ್ಟಡಗಳು ಸಂರಕ್ಷಣೆ ಕಾಣುವ ಸಾಧ್ಯತೆ ತೀರಾ ಕಡಿಮೆ.

ಅನುದಾನ ಬಳಕೆ ಮಾಡದೆ ಹೋದರೆ ಅನುದಾನ ಲ್ಯಾಪ್ಸ್ ಆಗುವ ಸಾಧ್ಯತೆ ಇದೆ. ಕಟ್ಟಡಗಳ ಸಂರಕ್ಷಣೆ ವಿಚಾರ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅನುದಾನವನ್ನು ಬೇರೆ ಕಾಮಗಾರಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಗರ ಪಾಲಿಕೆಯ ಸ್ಪಷ್ಟನೆಯಾಗಿದೆ.

ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಯಿಂದ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಸಂರಕ್ಷಣಾ ಕಾರ್ಯವನ್ನು ಕೈ ಬಿಡಲಾಯಿತು.

ನಂತರ ಕಟ್ಟಡ ಸಂರಕ್ಷಣೆ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು, ಹೋರಾಟಗಳು ನಡೆಯಿತು. ಅಲ್ಲದೆ, ಹೈಕೋರ್ಟ್‌ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ಅಂತಿಮವಾಗಿ ಜಿಲ್ಲಾ ಪಾರಂಪರಿಕ ಸಮಿತಿಯಲ್ಲಿ ಕಟ್ಟಡದ ವಿಚಾರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನ್ಯಾಯಾಲಯ ನಿರ್ದೇಶ ನೀಡಿತು. ಜಿಲ್ಲಾ ಪಾರಂಪರಿಕ ಸಮಿತಿಯು ದೇವರಾಜ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ಕೆಡವಿ ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಸರ್ಕಾರ ಸಹ ಹೈಕೋರ್ಟ್‌ನಲ್ಲಿ ಜಿಲ್ಲಾ ಪಾರಂಪರಿಕ ಸಮಿತಿಯ ವರದಿಗೆ ಪೂರಕವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.