ವಿಜಯವಾಣಿ ಸುದ್ದಿಜಾಲ ಧಾರವಾಡ
ದೇವರಾಜ ಅರಸು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಬಡವರ, ಹಿಂದುಳಿದವರಿಗೆ ಸಾಮಾಜಿಕ ಮತ್ತು ಮೂಲಭೂತ ಅವಶ್ಯಕತೆ ಒದಗಿಸಿದವರು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ವಿದ್ಯಾರ್ಥಿ ವಸತಿ ನಿಲಯಗಳನ್ನು ಕಟ್ಟಿಸಿಕೊಟ್ಟ ಅವರು, ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಿದವರು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಡಿ. ದೇವರಾಜು ಅರಸು ಜನ್ಮದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ದೇವರಾಜು ಅರಸು ಅ೦ತಹ ವ್ಯಕ್ತಿಗಳು ಇದ್ದಾಗಲೇ ಸಮಾಜ ಸುಧಾರಣೆಯಾಗುತ್ತದೆ. ನಮ್ಮ ಕಾಯಕದ ಬಗ್ಗೆ ಕೀಳರಿಮೆ ಪಡಬಾರದು. ದೇವರಾಜು ಅರಸರ ತತ್ವ, ಆದರ್ಶ ಪಾಲಿಸೋಣ, ಅವರ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಪ್ರೊ. ಶಶಿಧರ ತೋಡಕರ ಮಾತನಾಡಿ, ಸಾಮಾಜಿಕ ಬದಲಾವಣೆ, ಬಡತನ ನಿರ್ಮೂಲನೆ, ಮನೆಗಳ ನಿರ್ಮಾಣದಲ್ಲಿ ಅದ್ವೀತಿಯ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುವಂತಹ ಮಕ್ಕಳು ದೇವರಾಜು ಅರಸು ಮಾರ್ಗದಲ್ಲಿ ನಡೆಯಬೇಕು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಬುನಾದಿ ಹಾಕಿದ ಕೀರ್ತಿ ಅರಸು ಅವರದು ಎಂದರು.
ಡಿ.ದೇವರಾಜು ಅರಸು ಶೈಕ್ಷಣಿಕ ಜೀವನದ ಕುರಿತು ಕರ್ನಾಟಕ ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಎಸ್. ಉಪನ್ಯಾಸ ನೀಡಿದರು.
ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಗೋಪಾಲ ಲಮಾಣಿ, ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಶಾಲ್, ನಾಮ ನಿರ್ದೇಶಿತ ಸದಸ್ಯ ಗುರುನಾಥ ಹುಲಗಾರ, ಅಲೆಮಾರಿ ಸಮುದಾಯದ ಮುಖಂಡ ರಾಜು ವೇಲಕರ, ಈಶ್ವರ ಬೆಳ್ಳಿಗಟ್ಟಿ, ಹಿಂದುಳಿದ ವರ್ಗಗಳ ವಸತಿ ನಿಲಯದ ನಿಲಯ ಪಾಲಕರು, ವಿದ್ಯಾರ್ಥಿಗಳು, ಇತರರು ಇದ್ದರು.
ರವಿ ಕುಲಕರ್ಣಿ ನಿರೂಪಿಸಿದರು. ಗೀತಾ ಹೂಗಾರ ವಂದಿಸಿದರು.