ಬೆಳಗಾವಿ: ರಾಜ್ಯ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಯಾವುದೇ ಜಾತಿ, ಧರ್ಮಭೇದ ಮಾಡದೆ ಸಮಾಜದ ಎಲ್ಲರ ಏಳಿಗೆಗಾಗಿ ಶ್ರಮಿಸಿದರು ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ದೇವರಾಜ ಅರಸು ಸಮಾಜದಲ್ಲಿ ಶೋಷಿತ ವರ್ಗದವರ ಆಶಾಕಿರಣವಾಗಿ ಜನರ ಸಬಲೀಕರಣ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ಕರ್ನಾಟಕ ರಾಜವನ್ನಾಗಿ ಮರು ನಾಮಕರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ನಿತೀಶ ಪಾಟೀಲ ಮಾತನಾಡಿ, ದೇವರಾಜ ಅರಸು ಶಿಕ್ಷಣದ ಮೂಲಕ ಮಕ್ಕಳು ರಾಜ್ಯ, ದೇಶ ನೆನಪಿಟ್ಟುಕೊಳ್ಳುವಂತೆ ಸಾಧನೆ ಮಾಡಬೇಕು ಎಂದರು.
ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಬಸವರಾಜ ಗಾರ್ಗಿ ವಿಶೇಷ ಉಪನ್ಯಾಸ ನೀಡಿ, ಡಿ. ದೇವರಾಜ ಅರಸು ಅವರ ಜನ್ಮದಿನ ನಮಗೆಲ್ಲ ಸ್ಫೂರ್ತಿಯಾಗಬೇಕು. ಹಿಂದುಳಿದ ವರ್ಗದವರ ಹಾಗೂ ಬಡವರ ಜೀವನೋದ್ಧಾರವಾಗುವಂತಹ ಕೆಲಸ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಬಣ್ಣಿಸಿದರು. ಡಿಸಿಪಿ ಸ್ನೇಹಾ ಪಿ.ವಿ., ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಪ್ರಿಯಾ ಕಡೇಚೂರ, ಪಾಲಿಕೆ ಆಯುಕ್ತ ಅಶೋಕ ದುಡದುಂಟಿ, ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಡಿ.ದೇವರಾಜ ಅರಸು ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಆವರಣದಲ್ಲಿ ಚಾಲನೆ ನೀಡಲಾಯಿತು. ಡಿಸಿ ಕಚೇರಿಯಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು ಕುಮಾರ ಗಂಧರ್ವ ಕಲಾಮಂದಿರಕ್ಕೆ ಆಗಮಿಸಿತು.