ಮಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಕೊಡಮಾಡುವ 2022-23ನೇ ಸಾಲಿನ ಡಿ.ದೇವರಾಜ ಅರಸು ದ.ಕ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮೂಲ್ಕಿ ಜಯಾನಂದ ದೇವಾಡಿಗ ಅವರನ್ನು ಆಯ್ಕೆ ಮಾಡಲಾಗಿದೆ.
ಮುಲ್ಕಿಯ ಜಯಾನಂದ ದೇವಾಡಿಗ ಅವರು ಡಿ. ದೇವರಾಜ ಅರಸು ಅವರ ಚಿಂತನೆ, ಆದರ್ಶ ತತ್ವಗಳಿಗೆ ಧ್ವನಿಯಾಗಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ, ನಿರಂತರವಾಗಿ ಹೋರಾಟ ಮಾಡಿದ್ದಾರೆ.
ಅರಸು ಅವರು ಕಾರ್ಯಗತಗೊಳಿಸಿದ ಯೋಜನೆ, ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಸಮುದಾಯಕ್ಕೆ ತಲುಪಿಸಲು ನಿರಂತರವಾಗಿ ಶ್ರಮಿಸಿದವರು. ಹಿಂದುಳಿದ ವರ್ಗಗಳ ಶಿಕ್ಷಣ, ಆರ್ಥಿಕ ಅಭಿವೃದ್ಧಿಗಾಗಿ, ಹಿಂದುಳಿದ ವರ್ಗಗಳ ಜನಾಂಗದವರನ್ನು ಮುಖ್ಯವಾಹಿನಿಗೆ ಕರೆ ತರಲು ಶ್ರಮಿಸಿದ್ದಾರೆ. ಆ.20ರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿರುವ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನೀಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 50 ಸಾವಿರ ರೂ.ನಗದು ಒಳಗೊಂಡಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಆಯ್ಕೆ ಜಯಾನಂದ ದೇವಾಡಿಗ ಅವರನ್ನು ಆಯ್ಕೆ ಮಾಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.