ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಂಯುಕ್ತಾಶ್ರಯದಲ್ಲಿ ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾದ, ಸಾಮಾಜಿಕ ನ್ಯಾಯದ ಹರಿಕಾರರಾದ ಡಿ. ದೇವರಾಜ ಅರಸು ರವರ 110 ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಡಿ. ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ.ದಿಲಿಷ್ ಸಶಿ ಅವರು ದೇವರಾಜು ಅರಸು ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಮಾತನಾಡಿ, ಸಮಾಜಿಕ ನ್ಯಾಯದ ಹರಿಕಾರ ದೇವರಾಜು ಅರಸು ಅವರು ಮೈಸೂರು ಜಿಲ್ಲೆಯ ಹುಣಸೂರು ಎಂಬ ಹಳ್ಳಿಯ ಹಿಂದುಳಿದ ಬಡ ವರ್ಗದಿಂದ ಬಂದವರು. ಬಡವರ, ದೀನ ದಲಿತರ, ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಮೈಸೂರು ರಾಜ್ಯಕ್ಕೆ ಏಕೀಕರಣದ ನಂತರ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು, ರೈತರಿಗಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿ 8 ಲಕ್ಷ ರೈತರನ್ನು 11 ಲಕ್ಷ ಎಕರೆ ಜಮೀನುಗಳಿಗೆ ಭೂ ಒಡೆಯರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆಯಡಿ ವಸತಿ ನಿಲಯಗಳ ನಿರ್ಮಾಣಕ್ಕೆ ಬುನಾದಿ ಹಾಕಿದವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ 103 ಹಿಂದುಳಿದ ವರ್ಗಗಳ ವಸತಿ ನಿಲಯಗಳಿವೆ. ವಿದ್ಯಾರ್ಥಿಗಳು ವಸತಿ ನಿಯಯಗಳಲ್ಲಿ ಸಮಯವನ್ನು ವ್ಯರ್ಥಮಾಡದೆ ಉತ್ತಮ ಅಭ್ಯಾಸ ಮಾಡಿ ದೇವರಾಜು ಅರಸು ರವರ ಜೀವನ ಚರಿತ್ರೆಯನ್ನು ಅರಿತುಕೊಂಡು ಅವರ ಕನಸನ್ನು ನನಸು ಮಾಡುವ ಮೂಲಕ ದೇಶಕ್ಕೆ ಉತ್ತಮ ಕೊಡಿಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರ ಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ ಮಾತನಾಡಿ, ದೇವರಾಜು ಅವರು ಮಾಡಿದ ಸಾಧನೆಯನ್ನು ಯುವ ಪೀಳಿಗೆ ಅರಿತುಕೊಂಡು ಅವರು ಕಂಡಂತ ಕನಸ್ಸು ನನಸ್ಸು ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಅವರು ಮಾಡಿದ ಯೋಜನೆಗಳು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಯನ್ನು ಪಡೆದುಕೊಳ್ಳಿ ಎಂದರು.
ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹೇಶ್ ಪಿ ನಾಯ್ಕ ಡಿ ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ದೇವರಾಜು ಅರಸು ಅವರು ಸಾಧನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಾಡಿನ ಮುಖ್ಯ ಮಂತ್ರಿಗಳಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದವರು. ಇವರು ದೂರ ದರ್ಶನಿಕದ ಫಲವಾಗಿ ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಿದೆ. ಅವರು ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದ ಎಸ್. ಎಸ್. ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ದೇವರಾಜ ಅರಸು ಜನ್ಮ ದಿನಾಚರಣೆ ಪ್ರಯುಕ್ತ ಹಿಂದುಳಿದ ವಸತಿ ನಿಲಯಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಮೇಶ್ ವೈ.ಕೆ, ನಗರಸಭೆ ಸದಸ್ಯ ಹನುಮಂತ ತಳವಾರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಾಮ ದಾಸ್ ನಾಯ್ಕ, ವಾರ್ಡನ್ ನಿಶ್ಚಲ್ ಕಾಂಬ್ಲೆ, ಮತ್ತಿತರರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ ಸ್ವಾಗತಿಸಿದರು. ಮುಖ್ಯೋಧ್ಯಾಪಯ ಡಾ. ಗಣೇಶ್ ಎನ್ ಬಿಷ್ಠಣ್ಣನವರು ನಿರೂಪಿಸಿದರು. ವಸತಿ ನಿಲಯ ವಾರ್ಡನ್ ಮಂಜುಳ ವಂದಿಸಿದರು. ಹಿಂದುಳಿದ ವರ್ಗಗಳ ಕಚೇರಿಯ ಪತ್ರಾಣಕಿತ ಅಧಿಕಾರಿ ವೀಣಾ ನಾಯಕ ಸಂದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.