ಜಿಲ್ಲೆ

ಮೈಸೂರಿನಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

ಮೈಸೂರು: ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರವಾದದ್ದು, ಅವರು ತಮ್ಮ ವಚನಗಳ ಮೂಲಕ ಗುರುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ. ಗುರುಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು ಎಂದು ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಎಸ್.ಲಕ್ಷ್ಮೀನಾರಾಯಣ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದೇವರ ದಾಸಿಮಯ್ಯ ಅವರ 176 ವಚನಗಳು ನಮಗೆ ಲಭ್ಯವಾಗಿದೆ. ಆ ವಚನಗಳು ಸಿಹಿ ನುಡಿಯಿಂದ, ಒಳ್ಳೆಯ ಸಂದೇಶದಿಂದ, ಎಚ್ಚರಿಕೆಯ ಮಾತಿನಿಂದ ಹಾಗೂ ವ್ಯಂಗ್ಯದಿಂದ ಸಹ ಕೂಡಿದೆ. ಇವರು ಬಸವಣ್ಣನಿಗಿಂತ ಹಿರಿಯವರಾಗಿದ್ದರು ಎಂದು ಹೇಳಿದರು.

ದೇವರ ದಾಸಿಮಯ್ಯ ಅವರು ದೇವರಲ್ಲಿ ನಂಬಿಕೆಯನ್ನು ಹೊಂದಿದ್ದರು, ವೃತ್ತಿಯಲ್ಲಿ ದೇವರನ್ನು ಕಾಣುತ್ತಿದ್ದರು. ಭಗವಂತನೇ ನಮಗೆ ಎಲ್ಲವನ್ನೂ ಕೊಡುವಾಗ ಚಿಂತೆ ಮಾಡುವುದೇಕೆ? ದೇವರನ್ನು ನಂಬಿದ ಮೇಲೆ ನಂಬಿಕೆ ಶ್ರದ್ಧೆಯಿಂದ ಪೂಜಿಸಬೇಕು ಎಂದು ನಮಗೆ ಹೇಳಿದ್ದಾರೆ, ಅದನ್ನು ನಾವು ಅರಿಯಬೇಕು ಎಂದರು.

ನಿಜವಾಗಿಯೂ ನಮಗೆ ಭಗವಂತನ ಮೇಲೆ ಭಕ್ತಿ ಇದ್ದರೆ ನಾವು ಕಾಡಲ್ಲಿ ಇದ್ದರೂ ಸಹ ನಾವು ನಾಡಿನಲ್ಲಿ ಇದ್ದೇವೆ ಎನ್ನುವ ಮನೋಭಾವ ನಮ್ಮಲ್ಲಿ ಬರುತ್ತದೆ. ನಾನು ನಾನು ಎಂಬುದನ್ನು ನಾವು ಮರೆಯಬೇಕು. ನಾನು ಎಂಬ ಅಹಂಕಾರ ನಮ್ಮಲ್ಲಿ ದೂರಾಗಬೇಕು ಎಂದು ತಿಳಿಸಿದರು.

ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಶ್ರೀ ಸ್ವಾಮಿ ಆಘಹರನಂದಾಜೀ ಮಹರಾಜ್ ಮಾತನಾಡಿ, ಪ್ರತಿಯೊಬ್ಬರು ಕಾಯಕವೇ ಕೈಲಾಸ ಎಂಬುವ ಮಾತಿನಂತೆ ತಮ್ಮ ಕರ್ತವ್ಯವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವುದರ ಮೂಲಕ ದೇವರನ್ನು ಕಾಣಬಹುದು ಎಂದು ಹೇಳಿದರು.

ಯಾವುದೇ ವೃತ್ತಿ ಮೇಲಲ್ಲ, ಕೀಳಲ್ಲ. ಪ್ರತಿಯೊಂದು ವೃತ್ತಿಯಲ್ಲಿ ಅದರದೇ ಆದ ಗೌರವವಿರುತ್ತದೆ. ನಾವು ಮಾಡುವಂತಹ ವೃತ್ತಿ ದೇವರನ್ನು ಪೂಜೆ ಮಾಡುವ ರೀತಿಯಲ್ಲಿ ಇರಬೇಕು ಎಂದರು.

ದೇವರ ದಾಸಿಮಯ್ಯ ಮಹಾ ಶಿವ ಭಕ್ತರಾಗಿದ್ದರು. ಭಕ್ತಿ ಎಂದರೆ ದೇವರಲ್ಲಿ ಅದನ್ನು ಕೊಡು ಇದನ್ನು ಕೊಡು ಎಂದು ಬೇಡುವುದಲ್ಲ, ಭಗವಂತನಲ್ಲಿ ತನ್ನನ್ನು ತಾನು ಕಾಣುವುದು. ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡವುದು. ನಿಸ್ವಾರ್ಥ ಭಕ್ತಿಯೇ ನಿಸ್ವಾರ್ಥ ಸೇವೆಯಾಗುತ್ತದೆ. ಭಗವಂತ ಭಕ್ತರಿಗೆ ವಿವಿಧ ರೀತಿಯ ಕಷ್ಟವನ್ನು ನೀಡಿ ನಂತರ ಕೈ ಹಿಡಿಯುತ್ತಾನೆ ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಸದಸ್ಯ ಸಿ.ಆರ್. ಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಆರ್.ಸುನೀಲ್, ಶೋಭಾ ಸುನೀಲ್, ಹೇಮಾ ಗಂಗಾಪ್ಪ, ಬಾಲರಾಜ್, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳ ಶ್ರೀನಿವಾಸ್, ನೇಕಾರ ಒಕ್ಕೂಟದ ಅಧ್ಯಕ್ಷ ದಿನೇಶ್, ಸಮುದಾಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ಸಮುದಾಯದ ಮುಖಂಡ ಸತ್ಯಾನಂದ ವಿಟ್ಟು ಇದ್ದರು.