ಜಿಲ್ಲೆ

ದೇವರ ದರ್ಶನ ಪಡೆದವರಲ್ಲಿ ಕೃತಾರ್ಥ ಭಾವ: ನೆಲಮಂಗಲದಲ್ಲಿ ವೈಕುಂಠ ಏಕಾದಶಿ ಮಹೋತ್ಸವ ವಿಜೃಂಭಣೆ

Bengaluru Rural

ನೆಲಮಂಗಲ: ಪಟ್ಟಣದ ವೀವರ್ಸ್‌ ಕಾಲನಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಮತ್ತು ತಾಲೂಕಿನ ಪುರಾಣ ಪ್ರಸಿದ್ಧ ಶಮಿಗಿರಿ ಕ್ಷೇತ್ರವೆಂದೆ ಪ್ರಸಿದ್ಧಿಯಾದ ಬಸವನಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ವಿಕಾರಿನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು, ಪೌಷ ಮಾಸದ ಶುದ್ಧ ವೈಕುಂಠ ಏಕಾದಶಿ ಮಹೋತ್ಸದ ಪ್ರಯುಕ್ತ ದೇವಾಲಯಗಳಲ್ಲಿನ ಮಹಾಗಣಪತಿ, ವೈನತೇಯ ಸಮೇತ ಶ್ರೀ ಲಕ್ಷ್ಮೀವೆಂಕಟೇಶ್ವರ, ಲಕ್ಷ್ಮೀವೆಂಕರಮಣ ಪ್ರಮುಖ ದೇವರಿಗೆ ಆಭರಣ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಿದ್ದರ ಜತೆಗೆ ಸುಪ್ರಭಾತ ಸೇವೆ, ಧೂಪ ದೀಪ, ಚಾಮರ, ವ್ಯಂಜನ ಸೇವೆ ಅಭಿಷೇಕಗಳಂತಹ ವಿಶೇಷ ಪೂಜಾಧಿ ನೆರವೇರಿಸಲಾಯಿತು.

ಸೋಮವಾರ ಬೆಳಗಿನ ಜಾವದಿಂದಲೇ ದೇವಾಲಯಕ್ಕೆ ಭೇಟಿ ನೀಡಿದ ಸಹಸ್ರ ಸಂಖ್ಯೆಯ ಭಕ್ತರು ಸ್ವಾಮಿಯ ದರ್ಶನ ಪಡೆದರು. ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಆಕರ್ಷಕ ವೈಕುಂಠ ದ್ವಾರ: ವೀವರ್ಸ್‌ ಕಾಲನಿ, ಬಸವನಹಳ್ಳಿ 2 ದೇಗುಲಗಳಲ್ಲೂ ಪ್ರವೇಶ ದ್ವಾರದ ಉತ್ತರ ದಿಕ್ಕಿನಲ್ಲಿ ಸಪ್ತ ವೈಕುಂಠ ದ್ವಾರ ನಿರ್ಮಿಸಿದ್ದು ಭಕ್ತರನ್ನು ಆಕರ್ಷಿಸಿತು. ದೇವಾಲಯದಲ್ಲಿನ ಪ್ರಮುಖ ದೇವರ ದರ್ಶನ ಪಡೆದ ಭಕ್ತರು ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀವೆಂಕಟರಮಣನ ದೇವರನ್ನು ತೂಗುವ ಉಯ್ಯಲೆಯಲ್ಲಿ ಇಟ್ಟಿದ್ದು, ಕೆಳಭಾಗದಲ್ಲಿ ಹಾದು ಹೋಗಲು ವ್ಯವಸ್ಥೆ ವಿಶೇಷ ಮಾಡಲಾಗಿತ್ತು.

ಲಾಡುವಿತರಣೆ: ದಿನವೀಡಿ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ದೇವಾಲಯ ಸಮಿತಿಯಿಂದ ಸಹಸ್ರ ಸಂಖ್ಯೆಯ ಸಿಹಿಲಾಡು ವಿತರಣೆ ಮಾಡಲಾಯಿತು. ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.

ಲಕ್ಷ್ಮೀವೆಂಕಟೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಂ.ನಾರಾಯಣ್, ಪದಾಧಿಕಾರಿಗಳಾದ ಆಂಜಿನಪ್ಪ, ಎಂ.ಗಂಗರಾಜು, ನಾರಾಯಣ್‌ರಾವ್, ರಮೇಶ್, ಪ್ರಕಾಶ್, ಕೇಶವ, ಲೋಕೇಶ್, ನಂದಕುಮಾರ್, ಹೇಮಂತ್, ಸುರೇಶ್, ಹೇಮಮೂರ್ತಿ, ಪುರಸಭೆ ಸದಸ್ಯ ಪದ್ಮನಾಭ, ಬಾರತೀಬಾಯಿ ಮತ್ತಿತರರು ಇದ್ದರು.

ಹನುಮ ದೇಗುಲಗಳಲ್ಲೂ ವಿಶೇಷ ಪೂಜೆ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬೈರಶೆಟ್ಟಿಹಳ್ಳಿ ಮತ್ತು ಚೆನ್ನಪ್ಪ ಬಡಾವಣೆಯಲ್ಲಿ ಹನುಮನ ದೇವಾಲಯಗಳಲ್ಲೂ ವೈಕುಂಠ ಏಕಾದಶಿ ಆಚರಣೆ ಮಾಡಲಾಯಿತು.ಚೆನ್ನಪ್ಪ ಬಡಾವಣೆ ಶ್ರೀ ಆಂಜನೇಯ ದೇವರಿಗೆ ಮಾಡಿದ್ದ ಹೂವಿನ ಅಲಂಕಾರ ವಿಶೇಷವಾಗಿತ್ತು.