ಮೈಸೂರು: ಸಂವಹನ ಪ್ರಕಾಶನ ವತಿಯಿಂದ ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ದೇವಣ್ಣ ಹೊಸಕೋಟೆ ರಚನೆಯ ‘ಅಲ್ಲಮ ಚರಿತಾಮೃತ’ ಮತ್ತು ‘ಹರಿಶ್ಚಂದ್ರ ಕಥಾಮೃತ’ ಕೃತಿಗಳು ಲೋಕಾರ್ಪಣೆಗೊಂಡಿತು.
ಹರಿಶ್ಚಂದ್ರ ಕಥಾಮೃತ ಕೃತಿ ಕುರಿತು ಮಾತನಾಡಿದ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ದೇವಣ್ಣ ಹೊಸಕೋಟೆ ಅವರು ನಾವೆಲ್ಲ ಓದಿ ಆಸ್ವಾದಿಸುವಂತಹ ಕೃತಿ ರಚಿಸಿದ್ದಾರೆ. ಮನಸ್ಸಿಗೆ ತಾಕುವ ಹಾಗೆ ‘ಹರಿಶ್ಚಂದ್ರ ಕಥಾಮೃತ’ ಕೃತಿಯನ್ನು ಸರಳ ರಗಳೆಯ ರೂಪದಲ್ಲಿ ರಚಿಸಿದ್ದಾರೆ ಎಂದರು.
ರಗಳೆ ಮೂಲಕ ಕೃತಿ ರಚಿಸಿದರೆ ಹೆಚ್ಚು ಜನರನ್ನು ತಲುಪಲು ಸಾಧ್ಯವಿಲ್ಲ. ಆದರೂ ಸಹ ದೇವಣ್ಣ ರಗಳೆಯಲ್ಲಿ ಕೃತಿ ರಚಿಸಿದ್ದಾರೆ. ಜನಪ್ರೀಯತೆ ಗಳಿಸಬೇಕಾಗಿದ್ದಲ್ಲಿ ಅವರು ಕಾದಂಬರಿ ಬರೆಯಬಹುದಿತ್ತು. ಆದರೆ, ದೇವಣ್ಣ ಅವರು ಜನಪ್ರಿಯತೆಗೋಸ್ಕರ ಈ ಕೃತಿ ರಚಿಸಿಲ್ಲ ಎಂದು ಹೇಳಿದರು.
ಕೃತಿಗಳನ್ನು ಸೂತ್ತೂರಿನ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಶ್ರೀ ಕುಂದೂರು ಮಠದ ಡಾ. ಶ್ರೀ ಶರತ್‌ಚಂದ್ರ ಸ್ವಾಮೀಜಿ, ಲೇಖಕ ಪ್ರೊ.ದೇವಣ್ಣ ಹೊಸಕೋಟೆ, ಪ್ರಕಾಶಕ ಡಿ.ಎನ್.ಲೋಕಪ್ಪ, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಹಾಗೂ ಇತರರು ಇದ್ದರು.