ಜಿಲ್ಲೆ

ಜಿಲ್ಲಾ ಗಡಿಯಲ್ಲಿ ಕ್ಯಾಮರಾ ಕಣ್ಗಾವಲು

ದೇವಣಗಾಂವ: ವಿಜಯಪುರ-ಕಲಬುರಗಿ ಜಿಲ್ಲೆಯ ಗಡಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ತುರ್ತು ಸರಕು ಹೊರತುಪಡಿಸಿ ಯಾವುದೇ ವಾಹನ ಸಂಚರಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಲಮೇಲ ಎಎಸ್‌ಐ ನಿಂಗಪ್ಪ ಪೂಜಾರಿ ಹೇಳಿದರು.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಕಲಬುರಗಿ, ವಿಜಯಪುರ ಎರಡೂ ಜಿಲ್ಲೆಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯ. ಆದ್ದರಿಂದ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಚೆಕ್ ಪೋಸ್ಟ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅನಾವಶ್ಯಕ ವಾಹನ, ವ್ಯಕ್ತಿಗಳ ಮೇಲೆ ನಿಗಾ ಇರಿಸಿ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸೊನ್ನ ಬ್ಯಾರೇಜ್ ಮೇಲೆ ಜನರು ಕದ್ದು ಓಡಾಡುವುದನ್ನು ಸ್ಥಗಿತಗೊಳಿಸುವುದಕ್ಕಾಗಿ ಅಲ್ಲಿ ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಲಾಗಿದೆ ಎಂದು ಹೇಳಿದರು.
ಈ ಮೊದಲು ದೇವಣಗಾಂವ - ಆಲಮೇಲ ರಸ್ತೆಯಲ್ಲಿದ್ದ ಚೆಕ್ ಪೋಸ್ಟ್‌ನ್ನು ವಿಜಯಪುರ- ಕಲಬುರಗಿ ಜಿಲ್ಲೆಗಳ ಗಡಿಯಾಗಿರುವ ದೇವಣಗಾಂವ ಸೇತುವೆ ಬದಿಗೆ ಸ್ಥಳಾಂತರಿಸಿ ಮತ್ತಷ್ಟು ಬಿಗಿಯಾದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ವಿ.ಕೆ. ಪಾಟೀಲ, ಆರೋಗ್ಯ ಇಲಾಖೆಯ ಈರಣ್ಣ ಯಡ್ರಾಮಿ, ಪೊಲೀಸ್ ಇಲಾಖೆಯ ಎಸ್.ಬಿ. ದಿಂಡವಾರ, ಪ್ರಭಯ್ಯ ಪೂಜಾರಿ, ಖಾಜೆಸಾಬ ಚೌಧರಿ, ಮಹಿಬೂಬ್ ಚೌಧರಿ, ಗುಂಡು ಕುರುಮಲ್ ಇದ್ದರು.