ಎ.ಆರ್. ರಘುರಾಮ ಮೈಸೂರು
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅರಮನೆ ಸಮೀಪದ ಅಗ್ರಹಾರದಲ್ಲಿ ‘ಅಭಿನಯ ಶಂಕರಾಲಯ’ ಎಂಬ ಶ್ರದ್ಧಾ ಕೇಂದ್ರವಿದೆ. ಇದು ಶಕ್ತಿ ಶಾರದೆ ಪೀಠವೂ ಹೌದು. ಜ್ಞಾನದಾಯಿನಿ ಆರಾಧನೆಯೊಂದಿಗೆ ನಿತ್ಯವೂ ಮಕ್ಕಳಿಗೆ ಇಲ್ಲಿ ಅಕ್ಷರಾಭ್ಯಾಸ ಶುಭಾರಂಭವಾಗುತ್ತದೆ. ಇದು ಜಗದ್ಗುರುಗಳ ಜನ್ಮಭೂಮಿ. ವೇದ-ಆಗಮ ಕಲಿಕೆಗೆ ಕಮ್ಮಟ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅಗಣಿತ ಸೇವೆ ನೀಡುತ್ತಿರುವ ಕ್ಷೇತ್ರ. ವಿದ್ಯಾಧಿದೇವತೆ ಶಾರದೆ ನೆಲೆ ಈಗ ಸಾರ್ಥಕ ಶತಮಾನ ಪೂರ್ಣಗೊಳಿಸಿದೆ. ಅದಕ್ಕಾಗಿ ಒಂದು ವಾರ ಸಂಭ್ರಮದ ಉತ್ಸವ ಆಯೋಜನೆಗೊಂಡಿದೆ. ಮಂದಿರ ನವ ವಧುವಿನಂತೆ ಸಿಂಗಾರಗೊಂಡಿದೆ.
ಆದಿಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ದಕ್ಷಿಣಾಮ್ನಾಯ ಶೃಂಗೇರಿ ಸಂಸ್ಥಾನಕ್ಕೆ ಮೇರು ಶ್ರೇಣಿಯ ಪೀಠಾಧಿಪತಿಯನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಈ ತಾಣಕ್ಕೆ ಇದೆ. 33ನೇ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ (ಶಿವಸ್ವಾಮಿ) ಜನಿಸಿದ್ದು ಈ ಸ್ಥಳದಲ್ಲೇ (1872 -1912). ಆದಿ ಶಂಕರರ ಮಹೋನ್ನತ ಕೃತಿಗಳನ್ನು ಪ್ರಕಟಿಸಿ, ಅವರ ಜನ್ಮಸ್ಥಳ ಕೇರಳದ ಕಾಲಟಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ಜಗದ್ಗುರುಗಳ ಸೇವೆ ದೊಡ್ಡದು.ಹಾಗಾಗಿ ನಂತರ ಪೀಠಕ್ಕೆ ಬಂದ 34ನೇ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ 1924ರಲ್ಲಿ ಶಾರದೆಯನ್ನು ಇವರ ಮನೆಯಲ್ಲೇ ಪ್ರತಿಷ್ಠಾಪಿಸಿದರು. ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ದೇಗುಲ ನಿರ್ಮಿಸಿಕೊಟ್ಟರು. ಅರಮನೆ- ಗುರುಮನೆ ಸಂಬಂಧದ ಪ್ರತಿಕವಾಗಿ ಈ ಸನ್ನಿಧಿ ರೂಪುಗೊಂಡಿತು. ಗುರು ಮನೆಯೇ ಶಾರದಾ ಮಂದಿರವಾಯಿತು. ಶಿಲಾ ದೇಗುಲಕ್ಕೆ ‘ಅಭಿನವ ಶಂಕರಾಲಯ’ ಎಂದೇ ನಾಮಕರಣವಾಯಿತು. ಈ ಭವ್ಯ ಮಂದಿರವೀಗ ಸಾರ್ಥಕ 100 ವಸಂತ ಕ್ರಮಿಸಿದೆ ಎಂಬುದೇ ದೊಡ್ಡ ಮೈಲಿಗಲ್ಲು.
ವಿದ್ಯಾರಂಭಕ್ಕೆ ಇದು ಪವಿತ್ರ ವೇದಿಕೆ: ಮೈಸೂರಿನ ಬಹುತೇಕರು ಮಕ್ಕಳ ಅಕ್ಷರಾಭ್ಯಾಸ ಆರಂಭವಾಗುವುದು ಶಾರದೆ ದೇಗುಲದಲ್ಲೇ. ಶಾರದೆ ಅಕ್ಷರಕ್ಕೆ ಅಭಿಮಾನಿ ದೇವತೆ. ಹಾಗಾಗಿ ವಿದ್ಯಾಪ್ರಾಪ್ತಿಗಾಗಿ ಸರಸ್ವತಿ ಮೂಲಮಂತ್ರ ಜಪದೊಂದಿಗೆ ನಿತ್ಯವೂ ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರುತ್ತದೆ. ವಿಜಯದಶಮಿ ದಿನ ಬಹು ಪ್ರಶಸ್ತ ಕಾಲವಾದ್ದರಿಂದ ಅಂದು ಮಕ್ಕಳ ದಂಡೇ ಪೂಜೆಗೆ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ಹಾಲ್ ಟಿಕೆಟ್, ಪೆನ್ನುಗಳನ್ನು ಶಾರದೆಯ ಸನ್ನಿಧಿಯಲ್ಲಿ ಇಟ್ಟು ಪೂಜಿಸಿ ವಿದ್ಯಾರ್ಥಿಗಳಿಗೆ ಪ್ರದಾನ ಮಾಡುವುದು ವಿಶೇಷ.
ವರ್ಷಪೂರ್ಣ ವೈವಿಧ್ಯಮಯ ಚಟುವಟಿಕೆ : ಅಭಿನವ ಶಂಕರಾಲಯದಲ್ಲಿ ಶ್ರೀ ಮಹಾಗಣಪತಿ, ಸತ್ಯನಾರಾಯಣ, ನವಗ್ರಹ, ನಾಗ, ಶ್ರೀ ಆದಿಶಂಕರಾಚಾರ್ಯ, ಜಗದ್ಗುರು ನೃಸಿಂಹ ಭಾರತಿ ಸನ್ನಿಧಾನವಿದೆ. ಹುಣ್ಣಿಮೆಯಂದು ಚಂಡಿಕಾಯಾಗ, ಸತ್ಯನಾರಾಯಣ ಪೂಜೆ, ಸಂಕಷ್ಟಿ, ಪ್ರದೋಶ, ಅಮಾವಾಸ್ಯೆಗೆ ಮೃತ್ಯುಂಜಯ ಹೋಮ, ರುದ್ರಹೋಮ, ಕೃಷ್ಣ ಏಕಾದಶಿ ರುದ್ರ ಕ್ರಮಾರ್ಚನೆ, ಜ್ಯೇಷ್ಠ ಮಾಸದಲ್ಲಿ 3 ದಿನ ವಾರ್ಷಿಕೋತ್ಸವ, 5 ದಿನ ಶಂಕರೋತ್ಸವ, ಧರ್ಮೋಪನಯನ ಇತ್ಯಾದಿ ನೆರವೇರುತ್ತದೆ. ನವರಾತ್ರಿ ಸಂದರ್ಭ ದಿನವೂ ಶಾರದೆಗೆ ವಿಶೇಷ ಅಲಂಕಾರ ವೈಭವ ಇರುತ್ತದೆ.
ವೇದ ಪಾಠಶಾಲೆ : ಮಕ್ಕಳಿಗೆ ಇಲ್ಲಿ 26 ವರ್ಷಗಳಿಂದ ಪೂರ್ಣಾವಧಿ ಋಗ್ ಮತ್ತು ಯಜುರ್ ಸಂಹಿತೆ ಕಲಿಸಲಾಗುತ್ತದೆ. ಅದಕ್ಕಾಗಿ ವೇದಪಾಠ ಶಾಲೆ ಮತ್ತು ಗ್ರಂಥಾಲಯ ಇದೆ. ಶ್ರೀ ಶಾರದಾ ಅದ್ವೈತ ಶೋಧ ಕೇಂದ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಬಡ, ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರವನ್ನು ಪ್ರತಿವರ್ಷ ನೀಡಲಾಗುತ್ತಿದೆ. ಸುಸಜ್ಜಿತ ಗೋ ಶಾಲೆಯೂ ಇಲ್ಲಿದೆ.
ಮಾತೃ ಸಂಗಮ: ಮಾತೆಯರಿಗೆ ಪ್ರತಿ ಶುಕ್ರವಾರ ಸಂಜೆ ಲಲಿತಾ ಸಹಸ್ರನಾಮ, ಸೌಂದರ್ಯಲಹರಿ, ಪ್ರತಿ ಗುರುವಾರ ಸಂಜೆ ಶ್ರೀ ಶಂಕರಾಚಾರ್ಯ ವಿರಚಿತ ಗುರುಸ್ತುತಿ ಪಾರಾಯಣ ಕಲಿಸಲಾಗುತ್ತದೆ. ಇದಕ್ಕಾಗಿ ನೂರಾರು ಮಾತೆಯರು ಸಮ್ಮಿಲನವಾಗುತ್ತಾರೆ.
ವಿಶೇಷ ಕಾರ್ಯಕ್ರಮ : ಶತಮಾನೋತ್ಸವ ಸಪ್ತಾಹ ಮಾ. 30ರಂದು ಸಹಸ್ರಮೋದಕ ಗಣಪತಿ ಹೋಮದೊಂದಿಗೆ ವಿಧ್ಯುಕ್ತ ಚಾಲನೆ ಪಡೆದಿದೆ. ಏ. 6 ರವರೆಗೆ ನಿತ್ಯವೂ ಶ್ರೀ ವಿಧುಶೇಖರ ಭಾರತೀ ತೀರ್ಥರ ಸಾನ್ನಿಧ್ಯದಲ್ಲಿ ಹೋಮ, ಪಾರಾಯಣ, ಶಿಖರ ಕುಂಭಾಭಿಷೇಕ ಮತ್ತು ಗುರುವಂದನೆ ಆಯೋಜನೆಗೊಂಡಿದೆ. ಈ ಸಂದರ್ಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ನಿತ್ಯ ಸಂಜೆ ದಿಗ್ಗಜರಿಂದ ಶಾಸ್ತ್ರೀಯ ಸಂಗೀತ ಕಛೇರಿಯೂ ರಂಜಿಸಲಿದೆ.
ಗುರುಗಳ ಕೃಪೆ: ಮೈಸೂರಿನಲ್ಲೇ ಜನಿಸಿ ಶ್ರೀ ಶಾರದಾ ಪೀಠದ ಪರಂಪರೆ ಬೆಳಗಿದವರು ಪರಮಪೂಜ್ಯ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ. ಅವರು ಸನಾತನ ಪರಂಪರೆ ಪ್ರತೀಕ. ಜಗನ್ಮಾತೆ ಶಾರದೆಯ ಮಹಾನುಗ್ರಹಕ್ಕೆ ಪಾತ್ರವಾದ ಮಹೋನ್ನತ ಶಿಖರ. ಅವರ ನೆನಪಿಗಾಗಿ ಇರುವ ಈ ಪವಿತ್ರ ಕ್ಷೇತ್ರ ನಾಡಿನ ಪ್ರಮುಖ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಮಾತೆ ಮತ್ತು ಗುರುಗಳ ಕೃಪೆಯಿಂದಲೇ ಶತಮಾನೋತ್ಸವ ವಿಜೃಂಭಿಸುತ್ತಿದೆ.- ಎಚ್. ರಾಮಚಂದ್ರನ್, ಧರ್ಮಾಧಿಕಾರಿ, ಮೈಸೂರು ಶಂಕರಮಠ.