ಜಿಲ್ಲೆ

ಕಿಡ್ನಿ ದಂಧೆ-ಕೊಲೆ ಪ್ರಕರಣ ಸಿಬಿಐಗೆ ವಹಿಸಿ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಯಾದಗಿರಿ ಜಿಲ್ಲೆ ಮಂಜಲಾಪುರ ಗ್ರಾಮದ ಬುದ್ಧಿಮಾಂದ್ಯ ಯುವಕ ಶಂಕ್ರಪ್ಪ ಹೂಗಾರ ಕೊಲೆ ಹಿಂದೆ ಕಿಡ್ನಿ ಕಳವು ದಂಧೆಯ ಜಾಲವಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಭೀಮರಾಯ ಮೇಟಿಗೆ ತಾಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಮನವಿ ಸಲ್ಲಿಸಿತು.

ಕೆಲವರ್ಷಗಳ ಹಿಂದೆ ಶಂಕ್ರಪ್ಪ ಹೂಗಾರ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಹೋಗಿದ್ದಾಗ ಬೆಡ್ ಖಾಲಿ ಇಲ್ಲ ಎನ್ನುವ ನೆಪ ಹೇಳಿ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕುಟುಂಬದವರ ಗಮನಕ್ಕೆ ತರದೆ ಯುವಕನನ್ನು ಆಶ್ರಮಕ್ಕೆ ಸೇರಿಸಲಾಗಿದೆ. ಆ ಬಳಿಕ ನಿಮಾನ್ಸ್‌ಗೆ ಸೇರಿಸುವುದಾಗಿ ಹೇಳಿ ಯುವಕನ ಎರಡೂ ಕಿಡ್ನಿ ಕಳ್ಳತನ ಮಾಡಲಾಗಿದೆ. ಆ ಬಳಿಕ ಮೃತ ಶಂಕ್ರಪ್ಪ ಹೂಗಾರನನ್ನು ಬೆಂಗಳೂರಿನ ಚಿತಾಗಾರದಲ್ಲಿ ಸುಡಲಾಗಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ತನಿಖೆ ನಡೆಸದೆ ಸುಮ್ಮನಾಗಿದ್ದರು ಎಂದು ದೂರಲಾಯಿತು.

ಕುಟುಂಬಸ್ಥರು ಮಾನವ ಹಕ್ಕುಗಳ ಆಯೋಗದ ಮೊರೆಹೋದಾಗ ಕಿಡ್ನಿ ದಂಧೆ ಬಯಲಾಗಿದ್ದು, ಶಂಕ್ರಪ್ಪ ಹೂಗಾರನದ್ದು ಕೊಲೆ ಎನ್ನುವುದೂ ರುಜವಾಗಿದೆ. ಪ್ರಕರಣ ಸಂಬಂಧ ಐವರು ಪೊಲೀಸರಿಗೆ 14ಲಕ್ಷ ರೂ. ದಂಡವನ್ನು ತನಿಖಾ ಸಂಸ್ಥೆ ವಿಧಿಸಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು ಎರಡು ವರ್ಷ ಕಳೆದರೂ ಸಿಐಡಿ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಆರೋಪಿಸಿದರು.

ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಕಿಡ್ನಿ ಕಳವು ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣಶಿಕ್ಷೆ ವಿಧಿಸಬೇಕು. ಶಂಕ್ರಪ್ಪ ಹೂಗಾರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.