ದೇವದುರ್ಗ: ಪ್ರತಿ ಜೀವಕ್ಕೂ ಹೃದಯವಿರುತ್ತದೆ. ಅದನ್ನು ಆರೋಗ್ಯವಾಗಿಟ್ಟುಕೊಂಡರೆ ಜೀವನ ಭದ್ರವಾಗಿರಲಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಹದ ಪ್ರಮುಖ ಅಂಗಗಳಲ್ಲಿ ಹೃದಯವನ್ನು ಸರಿಯಾಗಿ ನೋಡಿಕೊಳ್ಳುವುದು ಅಗತ್ಯ. ಪ್ರತಿ ಬಡಿತವೂ ಮುಖ್ಯ ಎನ್ನುವ ಘೋಷವಾಕ್ಯದೊಂದಿಗೆ ಹೃದಯ ದಿನ ಆಚರಿಸಲಾಗುತ್ತಿದೆ ಎಂದರು.
ಎದೆನೋವು, ಉಸಿರಾಟದ ತೊಂದರೆ, ಅನಿಯಮಿತ ಹೃದಯ ಬಡಿತ, ಆಯಾಸ, ತಲೆ ತಿರುಗುವಿಕೆ, ತೋಳು, ಕುತ್ತಿಗೆ, ಬೆನ್ನಿನ ಮೇಲೆ ನೋವು ಕಾಣಿಸಿಕೊಳ್ಳುವುದು ಹೃದಯಘಾತದ ಮುನ್ಸೂಚನೆಗಳಾಗಿವೆ.
ಈ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಯಮಿತ, ಸಮತೋಲಿತ ಆಹಾರ ಸೇವಿಸುವುದು, ಧೂಮಪಾನ ತ್ಯಜಿಸುವುದು, ಉಪ್ಪು ಮತ್ತು ಸಕ್ಕರೆ ಸೇವನೆ ಕಡಿಮೆ ಮಾಡುವುದು, ದಿನಕ್ಕೆ ಎಂಟು ತಾಸು ನಿದ್ರೆ ಮಾಡುವುದರಿಂದ ಹೃದಯಾಘಾತದಿಂದ ದೂರವಿರಬಹುದು. ವಾಕಿಂಗ್, ಯೋಗ, ಸೈಕ್ಲಿಂಗ್, ವ್ಯಾಯಾಮದ ಜತೆಗೆ ನಿಯಮಿತವಾಗಿ ಹೃದಯ ಮತ್ತು ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.