ಜಿಲ್ಲೆ

ಕಾಣದ ವೈಭವ, ನಿಲ್ಲದ ಸಂಪ್ರದಾಯ, ರಾಯಚೂರು ಜಿಲ್ಲೆಯ ವಿವಿಧೆಡೆ ವಿಜಯ ದಶಮಿ ಸಂಪನ್ನ

Raichur

ದೇವದುರ್ಗ: ಪಟ್ಟಣ ಸೇರಿ ತಾಲೂಕಾದ್ಯಂತ ಭಾನುವಾರ ಶ್ರದ್ಧೆ, ಭಕ್ತಿಯಿಂದ ವಿಜಯ ದಶಮಿ ಆಚರಿಸಲಾಗಿದ್ದು, ಜನ ಪರಸ್ಪರರು ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ಗಬ್ಬೂರು ಸಮೀಪದ ಸುಲ್ತಾನಪುರ ಪಂಚಾಕ್ಷರಿ ಮಠದಲ್ಲಿ ವಿಶೇಷ ಪೂಜೆ ಜರುಗಿದವು. ಪೀಠಾಧ್ಯಕ್ಷ ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವನ ನೀಡಿ, ಕರೊನಾ ಕಾರಣ ದಸರಾ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಹಿಂದಿನಿಂದ ನಡೆದುಬಂದ ಸಂಪ್ರದಾಯ ಪಾಲಿಸಲಾಗುತ್ತಿದೆ. ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ನೀಡಲಾಗುತ್ತಿದೆ. ಭಕ್ತರು ಕೂಡ ಮನೆಯಲ್ಲೇ ಹಬ್ಬ ಆಚರಿಸಬೇಕು ಎಂದರು.

ಲೋಕ ಸೇವಾ ಆಯೋಗದ ಸದಸ್ಯ ಎಚ್.ಶಿವಶಂಕರ ಸಾಹು, ಯಮನಾಳ, ಸುರೇಶಪ್ಪ ಎಲಿ ಸಾಹುಕಾರ, ಪಂಚಯ್ಯಸ್ವಾಮಿ ಕಂಬಿಮಠ, ಬಸನಗೌಡ ಪರಡ್ಡಿ, ಚಂದ್ರಕುಮಾರ ಸ್ವಾಮಿ, ಮಲ್ಲಯ್ಯ ಸ್ವಾಮಿ, ಬೂದೆಪ್ಪ ಹದ್ದಿನಾಳ ಇತರರು ಇದ್ದರು.

ಶ್ರೀಆರೂಢ ಮಠ: ತಾಲೂಕಿನ ಗಲಗ ಗ್ರಾಮದ ಶ್ರೀಆರೂಢ ಮಠದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಭಾನುವಾರ ಮಂಗಳಗೊಂಡಿತು. ಚನ್ನಬಸವಸ್ವಾಮಿ ಮಳೀಮಠ ಪ್ರವಚನ ನಡೆಸಿಕೊಟ್ಟರು. ಅಮರೇಶ ಕುಂಬಾರ ಗವಾಯಿ, ರವಿ ಕುಮಾರ ತಬಲಾ ಸಂಗೀತಾ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ ಬನ್ನಿ ಮುಡಿದರು. ಇದಲ್ಲದೇ ಪಟ್ಟಣದ ಶಂಭುಲಿಂಗೇಶ್ವರ ದೇವಸ್ಥಾನ, ಶ್ರೀಅಂಬಾಭವಾನಿ ದೇವಸ್ಥಾನ ಜಾಲಹಳ್ಳಿಯ ಶ್ರೀ ಜಯಶಾಂತಲಿಂಗೇಶ್ವರ ದೇವಸ್ಥಾನ, ಶ್ರೀ ಗಬ್ಬೂರಿನ ಬೂದಿಬಸವೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಸರಳವಾಗಿ ವಿಜಯದಶಮಿ ಆಚರಿಸಲಾಯಿತು.