ದೇವದುರ್ಗ: ಅನ್ನದಾಸೋಹದಿಂದ ನಾಡಿನ ಕಲ್ಯಾಣ ಸಾಧ್ಯ ಎಂಬುದನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಿರೂಪಿಸಿದ್ದಾರೆ. ಅನ್ನ, ಅಕ್ಷರ, ವಸತಿ ಎನ್ನುವ ತ್ರಿವಿಧ ದಾಸೋಹವನ್ನು ಜಗತ್ತಿಗೆ ನೀಡಿ ನಾಡಿಗೆ ಮಾದರಿಯಾಗಿದ್ದಾರೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಶಬರಿ ವೃತ್ತ ಸಮೀಪದ ವೀರಶೈವ ಲಿಂಗಾಯತ ಸಮುದಾಯ ಹಾಗೂ ಶಿವಕುಮಾರ ಸ್ವಾಮೀಜಿ ಶಿಷ್ಯ ಬಳಗ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಮಕೂರು ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಉನ್ನತ ಹುದ್ದೆಗೇರಿದ್ದಾರೆ. ಮೌನಯೋಗಿಯಾಗಿ ಸ್ವಾಮೀಜಿ ತಮ್ಮ ಕಾಯಕ ಮಾಡಿದ್ದಾರೆ ಎಂದರು.
ಮುಖಂಡರಾದ ಮಲ್ಲಯ್ಯ ತಾತ ಅಂಜಳ, ಮಹಾದೇವ ಪಾಟೀಲ್, ವೆಂಕಟರಾಯ ಕಕ್ಕಲದೊಡ್ಡಿ, ಅಮರೇಶ ಕುಂಬಾರ, ಪ್ರಭಯ್ಯ ಸ್ವಾಮಿ, ಆನಂದ ಸ್ವಾಮಿ, ಅಯ್ಯನಗೌಡ, ನಾಗರಾಜ ಪಾಟೀಲ್ ಗೌರಂಪೇಟ್, ಸಿದ್ಧಲಿಂಗಪ್ಪ ಕೋರಿ, ಸತೀಶ ಜಾಜಿ, ಚಂದ್ರಶೇಖರ ವಿಭೂತಿ ವಕೀಲ, ಶರಣಯ್ಯ ಸ್ವಾಮಿ ಮುಂಡರಗಿ, ಬಸವರಾಜಪ್ಪ ಗೌಡ, ಪ್ರಹ್ಲಾದ್ ಶೆಟ್ಟಿ, ಶರಣಬಸವ ಸ್ವಾಮಿ, ಮಲ್ಲನಗೌಡ ಗೆಜ್ಜೆಭಾವಿ, ಪುರಸಭೆ ಸದಸ್ಯ ಹನುಮೇಶ್ ನಾಯಕ್, ಗಂಗನಗೌಡ ಇತರರಿದ್ದರು.
ಶ್ರೀಶಿವಕುಮಾರ ಸ್ವಾಮೀಜಿ ಕೋಟ್ಯಂತರ ಭಕ್ತರ ಪಾಲಿಗೆ ಆರಾಧ್ಯ ದೈವವಾಗಿರುವುದಲ್ಲದೆ, ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಸರ್ಕಾರ ಮಾಡದ ಕೆಲಸವನ್ನು ಸ್ವಾಮೀಜಿ ತಮ್ಮ ಜೀವನದುದ್ದಕ್ಕೂ ಮಾಡಿದ್ದಾರೆ. ಅನ್ನ, ಅಕ್ಷರ, ವಸತಿ ನೀಡುವುದು ಪುಣ್ಯದ ಕೆಲಸವೆಂದು ಭಾವಹಿಸಿ ಜಾತಿ, ಭಾಷೆ, ಧರ್ಮ ಎನ್ನದೆ ಎಲ್ಲ ಮಕ್ಕಳಿಗೂ ತ್ರಿವಿಧ ದಾಸೋಹ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ.
ಮಲ್ಲನಗೌಡ ಪಾಟೀಲ್
ವಕೀಲ