ಟಗರು ಕಾಳಗ, ಕಲ್ಲು ಎಳೆಯುವ ಸ್ಪರ್ಧೆ
ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಶ್ರೀ ಕನಕಗುರುಪೀಠದಲ್ಲಿ 3ದಿನಗಳ ಕಾಲ ನಡೆಯುವ ಹಾಲುಮತ ಸಂಸ್ಕೃತಿ ವೈಭವ-2021 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀಮಠ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಶ್ರೀಮಠದ ಪೀಠಾಧಿಪತಿ ಸಿದ್ದರಾಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಜ.12ರಂದು ಬೆಳಗ್ಗೆ 6ಕ್ಕೆ ಬೀರದೇವರಿಗೆ ಅಭಿಷೇಕ, ಸಹಸ್ರ ಲಕ್ಕಿಪತ್ರೆ ಪೂಜೆ, 8ಕ್ಕೆ ಶ್ರೀಮಲ್ಲಿಕಾರ್ಜುನ ಹಿರಿವಗ್ಗಯ್ಯನವರಿಂದ ಹಾಲುಮತ ಧರ್ಮ ಧ್ವಜಾರೋಹಣ, 8.30ಕ್ಕೆ ಶುದ್ಧೋದಕ ಸ್ನಾನ, ಗಂಗಾಪೂಜೆ ನೆರವೇರಲಿದೆ. ಆಗತೀರ್ಥದ ಶ್ರೀರೇವಣಸಿದ್ದೇಶ್ವರ ಶಾಂತಯ್ಯ ಸ್ವಾಮೀಜಿ, ಹಾಲವರ್ತಿ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ, ಲಿಂಗಬೀರದೇವ ಸ್ವಾಮೀಜಿ, ಬೀರಪ್ಪ ಸ್ವಾಮೀಜಿಗಳು ಸಾನ್ನಿಧ್ಯವಹಿಸಲಿದ್ದಾರೆ.