ಮಲದಕಲ್ ಗ್ರಾಮದಲ್ಲಿ ಸ್ಮಶಾನಕ್ಕೆ ಬೇರೆ ಸ್ಥಳ ನಿಗದಿಗೆ ಒತ್ತಾಯಿಸಿ ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶಗೆ ಕರ್ನಾಟಕ ರೈತ ಸಂಘ ಗುರುವಾರ ಮನವಿ ಸಲ್ಲಿಸಿತು. ಪದಾಧಿಕಾರಿಗಳಾದ ಮಲ್ಲಯ್ಯ ಕಟ್ಟಿಮನಿ, ನಾಗಲಿಂಗಯ್ಯ ಸ್ವಾಮಿ, ರಂಗಣ್ಣ ಇರಬಗೇರಾ, ಶಿವಪ್ಪ ಹಾಗೂ ಭೂ ಸಾಗುವಳಿ ಫಲಾನುಭವಿಗಳು ಇದ್ದರು.  
ಜಿಲ್ಲೆ

ಸ್ಮಶಾನಕ್ಕೆ ಪ್ರತ್ಯೇಕ ಜಾಗ ನಿಗದಿ ಮಾಡಿ

ದೇವದುರ್ಗ: ತಾಲೂಕಿನ ಮಲದಕಲ್ ಗ್ರಾಮದಲ್ಲಿ ಸಾಗುವಳಿ ಜಮೀನನ್ನು ಸ್ಮಶಾನಕ್ಕೆ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದು, ಈ ನಿರ್ಧಾರ ಕೈಬಿಟ್ಟು ಬೇರೆ ಕಡೆ ನಿವೇಶನ ಗುರುತಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘಟನೆ ಗ್ರೇಡ್-2 ತಹಸೀಲ್ದಾರ್ ವೆಂಕಟೇಶಗೆ ಗುರುವಾರ ಮನವಿ ಸಲ್ಲಿಸಿತು.

ಮಲದಕಲ್ ಸೀಮಾಂತರದ ಸರ್ವೇ ನಂ. 363/7 ಜಮೀನಿನಲ್ಲಿ ರೈತ ಮಹಿಳೆಯರಾದ ಮಾಯಾ ಲಕ್ಷ್ಮಣ, ನೀಲಮ್ಮ ಈಶಪ್ಪ, ನಾಗಮ್ಮ ಶರಣಪ್ಪ, ರತ್ನಮ್ಮ ಕರಿಬಸಪ್ಪ, ಮಹಾದೇವಮ್ಮ ರಾಮಣ್ಣ, ಅಬ್ದುಲ್ ಖಾಸೀಂಸಾಬ್, ಜೈರಾಬಿ ಖಾಜಾಸಾಬ್ ಎನ್ನುವರು 20ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.

ಈಗಾಗಲೇ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವುದು ಕಂದಾಯ ಇಲಾಖೆ ಗಮನಕ್ಕಿದೆ. ಅದಲ್ಲದೆ ಮಲದಕಲ್ ಗ್ರಾಮದಲ್ಲಿ ಸ್ಮಶಾನಕ್ಕೆಂದೇ ಜಮೀನು ನಿಗದಿಗೊಳಿಸಲಾಗಿದೆ. ಆದರೆ ಕೆಲ ಗ್ರಾಮದ ಮುಖಂಡರು ಶಾಸಕರಿಗೆ ತಪ್ಪು ಮಾಹಿತಿ ನೀಡಿ, ಸಾಗುವಳಿ ಮಾಡಿಕೊಂಡಿರುವ ಜಮೀನಿನಲ್ಲಿ ಶಾಲೆ, ಸ್ಮಶಾನಕ್ಕೆ ಜಾಗ ಒದಗಿಸಲು ಪತ್ರ ಪರೆದಿದ್ದಾರೆ ಎಂದು ದೂರಿದರು.

20ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಬಡ ಮತ್ತು ಜಮೀನು ರಹಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು. ಸಾಗುವಳಿ ಮಾಡಿಕೊಂಡಿರುವ ರೈತ ಮಹಿಳೆಯರಿಗೆ ಹಕ್ಕುಪತ್ರ ನೀಡಬೇಕು. ಸ್ಮಶಾನಕ್ಕೆ ಬೇರೆ ಸ್ಥಳ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಲ್ಲಯ್ಯ ಕಟ್ಟಿಮನಿ, ನಾಗಲಿಂಗಯ್ಯ ಸ್ವಾಮಿ, ರಂಗಣ್ಣ ಇರಬಗೇರಾ, ಶಿವಪ್ಪ ಹಾಗೂ ಸಾಗುವಳಿ ಫಲಾನುಭವಿಗಳು ಇದ್ದರು.