ಜಿಲ್ಲೆ

ದೇವದುರ್ಗ ಅಖಂಡ ತಾಲೂಕಿಗಾಗಿ ಜನಾಕ್ರೋಶ ರ‌್ಯಾಲಿ 14ಕ್ಕೆ ; ಐಕ್ಯ ಹೋರಾಟ ಸಮಿತಿ ಮುಖ್ಯಸ್ಥ ಕಾಕರಗಲ್ ಹೇಳಿಕೆ

ದೇವದುರ್ಗ: ದೇವದುರ್ಗ ತಾಲೂಕು ವಿಭಜನೆ ವಿರೋಧಿಸಿ ಹಾಗೂ ಅಖಂಡತೆಗಾಗಿ ಅ.14ರಂದು ಜನಾಕ್ರೋಶ ರ‌್ಯಾಲಿ ಹೋರಾಟ ನಡೆಸಲಾಗಿದೆ ಎಂದು ಅಖಂಡ ದೇವದುರ್ಗ ತಾಲೂಕು ಐಕ್ಯ ಹೋರಾಟ ಸಮಿತಿ ಮುಖಸ್ಥ ಹನುಮಂತಪ್ಪ ಕಾಕರಗಲ್ ಹೇಳಿದರು.

ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳಿಂದ ಪಕ್ಷಾತೀತವಾಗಿ ಬೃಹತ್ ರ‌್ಯಾಲಿ ನಡೆಸಲಾಗುವುದು. ಜಾಲಹಳ್ಳಿ, ದೇವದುರ್ಗ, ಗಬ್ಬೂರು ಹೋಬಳಿಯ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ತಾಲೂಕು ಹಿಂದುಳಿದಿದ್ದು, ಶಾಸಕ ಕೆ.ಶಿವನಗೌಡ ನಾಯಕ ಅಭಿವೃದ್ಧಿ ಮಾಡುವ ಬದಲು ತಮ್ಮ ಸ್ವಾರ್ಥಕ್ಕಾಗಿ ಒಡೆಯುತ್ತಿದ್ದಾರೆ. ಹೋಬಳಿಯಾಗಲೂ ಅರ್ಹವಲ್ಲದ ಅರಕೇರಾವನ್ನು ತಾಲೂಕು ಮಾಡಲು ಹೊರಟಿರುವುದು ಸ್ವಾರ್ಥ ರಾಜಕಾರಣ. 30 ವರ್ಷಗಳಿಂದ ಅರಕೇರಾ ರಾಜಕೀಯ ಶಕ್ತಿಕೇಂದ್ರವಾಗಿದ್ದರೂ ಅಭಿವೃದ್ಧಿ ಕಂಡಿಲ್ಲ. ಶುದ್ಧ ಕುಡಿವ ನೀರು, ಸಾರ್ವಜನಿಕ ಶೌಚಗೃಹ, ಪೊಲೀಸ್ ಠಾಣೆಯಿಲ್ಲ. ರಾಜ್ಯ ಹೆದ್ದಾರಿ ಇರಲಿ, ಸಾಮಾನ್ಯ ರಸ್ತೆಕೂಡ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.

ಮುಖಂಡ ಹನುಮಂತ್ರಾಯ ಚಿಕ್ಕಗುಡ್ಡ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್ ಮಾತನಾಡಿ, ತಾಲೂಕಿನಲ್ಲಿ ಮೆಡಿಕಲ್, ಇಂಜಿನಿಯರ್ ಕಾಲೇಜು ಇಲ್ಲ. ಸರ್ಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿಯಿವೆ. ಶಾಸಕರ ವಿರುದ್ಧ ಹೋರಾಟ ಮಾಡುವವರಿಗೆ ಬೆದರಿಸುವ, ಸುಳ್ಳು ಕೇಸ್ ಹಾಕುವ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಜಿ.ಬಸವರಾಜ ನಾಯಕ, ಮೇಲಪ್ಪ ಬಾವಿಮನಿ, ಮಲ್ಲಯ್ಯ ಕಟ್ಟಿಮನಿ, ತಾಪಂ ಸದಸ್ಯ ಗೋವಿಂದರಾಯ ಚಿಕ್ಕಗುಡ್ಡ, ಶಿವರಾಜ ನಾಯಕ, ಶಂಕರಗೌಡ ಚನ್ನೂರು, ಸಿದ್ದಲಿಂಗಪ್ಪ ಇತರರಿದ್ದರು.