ದೇವದುರ್ಗ: ಸೂರ್ಯನಾಯಕ ತಾಂಡಾದ ಹೆಸರು ಬದಲಾವಣೆ ಮಾಡದಿರಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪಟ್ಟಣದ ಮಿನಿವಿಧಾನಸೌಧದಲ್ಲಿ ಶಿರಸ್ತೇದಾರ್ ಉಮರಾಣಿಗೆ ಗುರುವಾರ ಮನವಿ ಸಲ್ಲಿಸಿತು.
ಸೂರ್ಯನಾಯಕ ತಾಂಡಾವನ್ನು ಹಿಂದಿನ ಸರ್ಕಾರ ಕಂದಾಯ ಗ್ರಾಮ ಮಾಡಿರುವುದು ಸ್ವಾಗತಾರ್ಹ. ಆದರೆ, ಗ್ರಾಮದ ಹೆಸರನ್ನು ಕೆಲ ರಾಜಕೀಯ ನಾಯಕರು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಈಗಿರುವ ಹೆಸರು ಬದಲಾಯಿಸಿ ಆಂಜನೇಯ ನಗರ ಎಂದು ಹೆಸರು ಬದಲಾವಣೆ ಮಾಡುವ ಹುನ್ನಾರ ನಡೆದಿದೆ. ಇದು ಗ್ರಾಮಸ್ಥರ ಭಾವನೆಗೆ ಧಕ್ಕೆ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂರ್ಯನಾಯಕ ಎನ್ನುವವರು ಗ್ರಾಮ ನಿರ್ಮಾಣಕ್ಕೆ, ಶಾಲೆ, ಅಂಗನವಾಡಿ ಕೇಂದ್ರ, ಕುಡಿವ ನೀರಿನ ಯೋಜನೆಗೆ ಅಮೂಲ್ಯವಾದ ಭೂಮಿ ನೀಡಿದ್ದಾರೆ. ಅವರ ಮೇಲಿನ ಅಭಿಮಾನ ಹಾಗೂ ನೆನಪಿಗಾಗಿ ಜನರು ಊರಿಗೆ ಸೂರ್ಯನಾಯಕ ತಾಂಡಾ ಹೆಸರನ್ನು ಇಟ್ಟಿದ್ದಾರೆ. ಗ್ರಾಮಸ್ಥರ ಎಲ್ಲ ದಾಖಲೆಗಳಲ್ಲೂ ಸೂರ್ಯನಾಯಕ ತಾಂಡಾ ಎಂದು ನಮೂದು ಆಗಿದೆ. ಆದರೆ, ಗ್ರಾಮದ ಹೆಸರು ಬದಲಾವಣೆ ಮಾಡಿ, ಅವರಿಗೆ ಅಗೌರವ ತರಲು ಕೆಲವರು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಗ್ರಾಮ ಮಾಡಿರುವ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಜನರ ಹಕ್ಕುಪತ್ರ ವಿತರಣೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾಮಸ್ಥರೊಂದಿಗೆ ತಹಸಿಲ್ ಕಚೇರಿ ಮುಂಭಾಗ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಸಹಕಾರ್ಯದರ್ಶಿ ಮುಸ್ತಾಫ್, ಕೆ.ಸುನೀಲ್‌ಕುಮಾರ, ವಿನೋದಕುಮಾರ, ಅಮರೇಶ ಚವ್ಹಾಣ್, ಹನುಮಂತ್ರಾಯ ಬೊಮ್ಮನಾಳ, ಹೇಮರೆಡ್ಡಿ, ರಂಗನಾಥ, ಮಲ್ಲಪ್ಪ, ತಿಪ್ಪಣ್ಣ ಮಡಿವಾಳ, ಸಂಗಮೇಶ ಕಲ್ಲೂರು, ಅನಿಲ್ ಇತರರಿದ್ದರು.