1. ಸುಲ್ತಾನಪುರದ ಶ್ರೀ ಪಂಚಾಕ್ಷರಿ ದೇವಸ್ಥಾನದ ಹೊರನೋಟ ಹಾಗೂ ಮೂರ್ತಿ. 2. ಸುಲ್ತಾನಪುರದಲ್ಲಿ 3ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಲ್ಯಾಣಮಠ. 3.ಸುಲ್ತಾನಪುರ ಮಠದಲ್ಲಿ ಆಶ್ರಯ ಪಡೆದ ಗೋವುಗಳು. 
ಜಿಲ್ಲೆ

ಭಜನೆಯಿಂದ ಮಳೆ ಧರೆಗಿಳಿಸಿದ ಭಗವಂತ > ಸುಲ್ತಾನಪುರ ಪಂಚಾಕ್ಷರಿ ಶ್ರೀಗಳ ಪವಾಡ > ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ

ದೇವದುರ್ಗ: ತಾಲೂಕಿನ ಗಬ್ಬೂರು ಸಮೀಪದ ಸುಲ್ತಾನಪುರ ಗ್ರಾಮದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಜಾತ್ರೋತ್ಸವ ಅಂಗವಾಗಿ 15 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ, ಅಯ್ಯಚಾರ ದೀಕ್ಷೆ ಹಾಗೂ ಧರ್ಮಸಭೆಯನ್ನು ಮಾ.16 ರಂದು (ಭಾನುವಾರ) ನಡೆಯಲಿವೆ.

ಕಳೆದ ಮೂರು ದಶಕಗಳ ಹಿಂದೆ ಸುತ್ತಲಿನ ಹಳ್ಳಿಗಳ ರೈತರು ಮಳೆಯಿಲ್ಲದೆ ಕಂಗಾಲಾಗಿ, ತಲೆಮೇಲೆ ಕೈಹೊತ್ತು ಕುಳಿತಿರುವಾಗ ಅವತರಿಸಿ ಬಂದವರೆ ಸುಲ್ತಾನಪುರದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ. ಅವರು, ಅಹೋರಾತ್ರಿ ಭಜನೆ ಮಾಡಿ ಧರೆಗೆ ಮಳೆ ತರಿಸಿ ರೈತರ ಕಣ್ಣೀರು ಒರೆಸಿದ್ದರು. ಅಂದಿನಿಂದ ಶ್ರೀ ಪಂಚಾಕ್ಷರಿ ಸ್ವಾಮೀಜಿಯನ್ನು ಭಕ್ತರು ಮಳೆತಾತ ಎಂದು ಆರಾಧಿಸುತ್ತಿದ್ದಾರೆ. ಅಧ್ಯಾತ್ಮ, ಸಂಸ್ಕೃತಿ ಬೋಧಿಸುತ್ತಾ, ಊರೂರು ಸಂಚರಿಸಿ ಅನೇಕ ಪವಾಡ ಮಾಡಿದ್ದಾರೆ. ಜೋಳಿಗೆ ಹಿಡಿದು ಅಲೆದಾಡಿ ಎರಡು ದಶಕಗಳ ಹಿಂದೆ ದೇವಸ್ಥಾನ ನಿರ್ಮಿಸಿದ್ದಾರೆ. ಅಂದು ಶ್ರೀಗಳು ಕಟ್ಟಿದ ಸಂಸ್ಥಾನ ಇಂದು ಸಮಾಜಸೇವೆಗೆ ಮುನ್ನುಡಿ ಬರೆದಿದೆ.

ಜಾತ್ರೋತ್ಸವದ ನಿಮಿತ್ತ ಮಾ.16ರಂದು 15 ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಿವಿಧ ಮಠಾಧೀಶರು ನೇತೃತ್ವದಲ್ಲಿ ಧರ್ಮಸಭೆ ಜರುಗಲಿದ್ದು, ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ.ಹಾಗೆಯೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಪ್ರತಿದಿನ ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯುತ್ತಿದೆ. ಶ್ರೀಮಠದಿಂದ ಗೋಶಾಲೆ ಆರಂಭಿಸಿದ್ದು 25ಕ್ಕೂ ಹೆಚ್ಚು ಜಾನುವಾರು ಆಶ್ರಯ ಪಡೆದಿವೆ. ಪೀಠಾಧಿಪತಿ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜಸೇವೆ ಮಾಡುತ್ತಾ ಭಕ್ತರ ಮನಗೆದ್ದಿದ್ದಾರೆ.

ಶ್ರೀಗಳ ಸಂಗೀತ ಪೂಜೆ: ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ 2005ರ ಮೇ 1ರಂದು ಪೀಠಾಧಿಪತಿಯಾದ ನಂತರ ಅನೇಕ ಸಮಾಜಮುಖಿ ಕೆಲಸ ಮಾಡಿ ಗಮನಸೆಳೆದಿದ್ದಾರೆ. ಇವರು ಕೈಗೊಳ್ಳುವ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಭಕ್ತರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಮಠದ ಆವರಣದಲ್ಲಿ ಶ್ರೀ ಸೋಮನಾಥ ಹಾಗೂ ರಾಜರಾಜೇಶ್ವರಿ ದೇಗುಲಗಳು, ಪೂಜೆಗುಹೆ ಮಂದಿರ, ದಾಸೋಹ ಮಂಟಪ, ಧ್ವಜಸ್ತಂಬ ಸ್ಥಾಪಿದ್ದಾರೆ. ಗೋವುಗಳ ರಕ್ಷಣೆಗಾಗಿ ಗೋಶಾಲೆ ಆರಂಭಿಸಿದ್ದಾರೆ. ಪಂಚಾಕ್ಷರಿ ಶ್ರೀಗಳ ಕರ್ತೃ ಗದ್ದುಗೆಗೆ 18 ಕಂಬಗಳ ಭವ್ಯ ಮಂಟಪ ನಿರ್ಮಿಸಿದ್ದಾರೆ. 3 ಕೋಟಿ ರೂ. ವೆಚ್ಚದಲ್ಲಿ 84 ಕಂಬಗಳ ಕಲ್ಯಾಣಮಠ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಕಲ್ಯಾಣ ಮಠ ಗಬ್ಬೂರು ಶ್ರೀ ಬೂದಿಬಸವೇಶ್ವರ ಸಂಸ್ಥಾನದ ಮಾದರಿ ಹೊಂದಿದೆ. ಯುವಜನರಿಗೆ ಸ್ಪರ್ಧಾತ್ಮ ಪರೀಕ್ಷೆ ಕುರಿತು ತರಬೇತಿ ನೀಡಲಾಗಿದೆ. ಏಳು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಕೋಟ್: ಶ್ರೀಪಂಚಾಕ್ಷರಿ ಮಹಾಸಂಸ್ಥಾನ ಅನೇಕ ಸಮಾಜಸೇವೆ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಶ್ರೀಗಳು ಬರಗಾಲದಲ್ಲೂ ಮಳೆತರಿಸಿ ರೈತರ ಪಾಲಿಗೆ ದೇವರಾಗಿದ್ದಾರೆ. ಶ್ರೀ ಶಂಭು ಸೋಮನಾಥ ಸ್ವಾಮೀಜಿ ಕೈಗೊಳ್ಳುವ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನೋಡಲು ಎರಡು ಕಣ್ಣು ಸಾಲದು. ಗೋಶಾಲೆ ಆರಂಭಿಸಿ, ಆರೈಕೆ ಮಾಡುತ್ತಿದ್ದಾರೆ.

> ರವಿಶಂಕರಯ್ಯಸ್ವಾಮಿ ಬೂದಿನಾಳ. ಶ್ರೀ ಮಠದ ಭಕ್ತ

ಕೋಟ್: ಭಕ್ತರನ್ನು ದುಶ್ಚಟಗಳಿಂದ ದೂರುವಿರಿಸಿ, ಸನ್ಮಾರ್ಗದಲ್ಲಿ ಕೊಂಡೊಯ್ಯಲು ಬೆಳದಿಂಗಳ ಶಿವಾನುಭವಗೋಷ್ಠಿ, ಪ್ರವಚನ, ಅಧ್ಯಾತ್ಮ ಕಾರ್ಯಕ್ರಮ ಮತ್ತು ಬಡತನ ಅಳಿಸಿ ದುಂದುವೆಚ್ಚಕ್ಕೆ ಕಡಿಮೆಮಾಡಲು ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. 3 ಕೋಟಿ ರೂ. ವೆಚ್ಚದಲ್ಲಿ 84 ಕಂಬಗಳ ಕಲ್ಯಾಣಮಠ ನಿರ್ಮಿಸಲಾಗುತ್ತಿದೆ. ಸುಲ್ತಾನಪುರಮಠ ನಮ್ಮಭಾಗದ ಭಾಗ್ಯದ ಬೆಳಕಾಗಿದ್ದು ಕಾಮಧೇನು ಕಲ್ಪವೃಕ್ಷವಾಗಿದೆ.

> ಬಸವರಾಜ ಮಸರಕಲ್. ಶ್ರೀಮಠದ ಭಕ್ತ