ದೇವದುರ್ಗ: ಮಹಿಳೆಯರಿಗೆ ಶಿಕ್ಷಣ ನೀಡಲು ಜೀವನವನ್ನೇ ಸವೆಸಿದ ಸಾವಿತ್ರಿಬಾಯಿ ಫುಲೆ, ಭಾರತದ ಆಧುನಿಕ ಶಿಕ್ಷಣದ ತಾಯಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ ಹೇಳಿದರು.
ಮ್ಯಾಕಲದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಲ್ಲಿ ಗುರುವಾರ ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಬಾಲ್ಯವಿವಾಹ, ಕೇಶಮುಂಡನ ಮತ್ತು ಸತಿ ಸಹಗಮನದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಅಂದಿನ ಕಾಲದಲ್ಲಿ ಸ್ತ್ರೀಯರು ಶಿಕ್ಷಕಿಯಾಗುವುದು ದೊಡ್ಡ ಸವಾಲು ಆಗಿತ್ತು ಎಂದರು.
ಸಾವಿತ್ರಿಬಾಯಿ ಫುಲೆ ಶಾಲೆಗೆ ಪಾಠ ಮಾಡಲು ಹೋಗುವಾಗ ಕೆಲವರು ತುಂಬಾ ತೊಂದರೆ ಕೊಡುತಿದ್ದರು. ಅವರ ಮೈಮೇಲೆ ಕೆಸರು, ಸಗಣಿ ಎರಚಿ ಕಲ್ಲು ತೂರುತ್ತಿದ್ದರು. ಅಂತಹ ಸಂರ್ಭದಲ್ಲಿ ಧೃತಿಗೆಡದ ಅವರು, ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ ಬಟ್ಟೆ ಬದಲಾಯಿಸಿಕೊಂಡು ಶಿಕ್ಷಣ ಕೊಡಲು ಅಣಿಯಾಗುತಿದ್ದರು. ಅಂದು ಅವರು ಮಾಡಿದ ಕಾರ್ಯದಿಂದ ಮಹಿಳೆಯರು ಉತ್ತಮ ಶಿಕ್ಷಣ ಪಡೆಯುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಮುಖ್ಯಶಿಕ್ಷಕ ಸೋಮಪ್ಪ ಡಿ.ಗಂಜಿಹಾಳ, ಶಿಕ್ಷಕಿಯರಾದ ರಮ್ಯಾ ವಿ.ಎ, ಅಂಬರೇಶ, ರವಿ, ದುರುಗಮ್ಮ ಇತರರಿದ್ದರು.