ಜಿಲ್ಲೆ

ಶಿಕ್ಷಣದಿಂದ ಸುಂದರ ಬದುಕು ಕಟ್ಟಿಕೊಳ್ಳಿ

ದೇವದುರ್ಗ: ಬುದ್ಧ, ಬಸವ ಹಾಗೂ ಅಂಬೇಡ್ಕರ್ ನಾಡಿನ ಅದ್ಭುತ ರತ್ನಗಳಾಗಿದ್ದು, ಎಲ್ಲರಿಗೂ ಈ ತ್ರಿಮೂರ್ತಿಗಳು ಆದರ್ಶವಾಗಬೇಕು. ಈ ಮಹನೀಯರು ತೋರಿದ ಸನ್ಮಾರ್ಗದಲ್ಲಿ ನಡೆದರೆ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಹೇಳಿದರು.

ಗಬ್ಬೂರಿನ ಅಂಬೇಡ್ಕರ್ ಭವನದಲ್ಲಿ ಸಮತಾ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ, ಸಮಾಜ ಕಲ್ಯಾಣ ಇಲಾಖೆ ಯೋಜನೆಗಳು ಹಾಗೂ ಮೀಸಲಾತಿ ಕುರಿತು ವಿಚಾರಗೋಷ್ಠಿ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಪ್ರತಿಯೊಬ್ಬರ ಬದುಕಿನ ಬದಲಾವಣೆಗೆ ಶಿಕ್ಷಣ ದೊಡ್ಡ ಅಸ್ತ್ರವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕಿದೆ ಎಂದರು.

ಬಡವರು, ದಲಿತರು ಮತ್ತು ತುಳಿತಕ್ಕೊಳಗಾದವರಿಗೆ ಅಂಬೇಡ್ಕರ್ ಜೀವನ ಆದರ್ಶವಾಗಬೇಕಿದೆ. ಶಿಕ್ಷಣದಿಂದಲೇ ಸಮುದಾಯದ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಕೃಷ್ಣ ಶಾವಂತಗೇರಾ ಹೇಳಿದರು.