ಜಿಲ್ಲೆ

ದೇವದುರ್ಗ-ಸಿರವಾರಗೆ ಹೆಚ್ಚಿನ ಬಸ್ ಓಡಿಸಿ; ವಿವಿಧ ಗ್ರಾಮಗಳ ವಿದ್ಯಾರ್ಥಿಗಳ ಒತ್ತಾಯ

Raichur

ಸಾರಿಗೆ ಇಲಾಖೆ ಡಿಪೋ ನೌಕರಗೆ ಮನವಿ

ದೇವದುರ್ಗ: ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದಿಂದ ಅರಕೇರಾ ಮಾರ್ಗವಾಗಿ ಸಿರವಾರಕ್ಕೆ ಹೆಚ್ಚುವರಿ ಬಸ್ ಓಡಿಸುವಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಸಾರಿಗೆ ಬಸ್ ಡಿಫೋದ ನೌಕರ ಫಯಾಜ್‌ಗೆ ಭಾನುವಾರ ಮನವಿ ಸಲ್ಲಿಸಿದರು. ಈ ಮೊದಲು ದೇವದುರ್ಗದಿಂದ ಸಿರವಾರಕ್ಕೆ ಬೆಳಗ್ಗೆ 5ಕ್ಕೆ ಸಂಚರಿಸುತ್ತಿದ್ದ ಬಸ್‌ಅನ್ನು ಏಕಾಏಕಿ ಬಂದ್ ಮಾಡಲಾಗಿದೆ. ಇದರಿಂದ ಕೊತ್ತದೊಡ್ಡಿ, ಪಿಲಗುಂಡ, ಅರಕೇರಾ, ಕ್ಯಾದಿಗೇರಿ, ಜಾಡಲದಿನ್ನಿ ಸೇರಿ ವಿವಿಧ ಹಳ್ಳಿಗಳ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೇ ಬೆಳಗ್ಗೆ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಅನಿವಾರ್ಯವಾಗಿ ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ನೀಡಿ ತೆರಳುವ ಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಮೊದಲು ಬೆಳಗ್ಗೆ 5ಕ್ಕೆ ಸಂಚರಿಸುತ್ತಿದ್ದ ದೇವದುರ್ಗ-ಸಿರವಾರ ಬಸ್‌ಅನ್ನು ಪುನರಾರಂಭಿಸಬೇಕು. ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇದೇ ಮಾರ್ಗದಲ್ಲಿ ಹೆಚ್ಚುವರಿ ಬಸ್ ಓಡಿಸಬೇಕು. ನಿರ್ಲಕ್ಷ್ಯ ಮಾಡಿದರೆ, ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.